ಶ್ರೀನಗರ (ಜಮ್ಮು-ಕಾಶ್ಮೀರ): ಇಂದಿನಿಂದ ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನರಾರಂಭಗೊಳ್ಳಲಿವೆ ಎಂದು ಅಲ್ಲಿನ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಎಲ್ಲಾ ಪೋಸ್ಟ್ ಪೇಯ್ಡ್ ಮೊಬೈಲ್ ಫೋನ್ಗಳು ಕಾರ್ಯನಿರ್ವಹಿಸಲಿವೆ. ಆದರೆ ಇಂಟರ್ನೆಟ್ ಬಳಕೆಗೆ ಇನ್ನಷ್ಟು ಸಮಯ ಕಾಯಬೇಕಿದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಅವಲೋಕಿಸಿದ ಬಳಿಕ ಮೊಬೈಲ್ ಫೋನ್ ಸೇವೆ ಪುನಃ ಆರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 5ರಂದು ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಮೊಬೈಲ್ ಸೇವೆಗೆ ನಿರ್ಬಂಧ ಹೇರಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿನ 66 ಲಕ್ಷ ಜನ ಮೊಬೈಲ್ ಬಳಕೆದಾರರಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಪೋಸ್ಟ್ ಪೇಯ್ಡ್ ಗ್ರಾಹಕರಾಗಿದ್ದಾರೆ. ಇಂದಿನಿಂದ ಅವರೆಲ್ಲರೂ ಮೊಬೈಲ್ ಬಳಕೆ ಮಾಡಬಹುದಾಗಿದೆ.
ಇದಕ್ಕೂ ಮುನ್ನ ಆಗಸ್ಟ್ 17ರಂದು ರಾಜ್ಯದ ಕೆಲವೆಡೆ ದೂರವಾಣಿ ಸೇವೆ ಪುನರಾರಂಭಿಸಲಾಗಿತ್ತು.