ಮುಂಬೈ: 72 ವರ್ಷಗಳ ಬಳಿಕ ಮುಂಬೈ ಭೀಕರ ಚಂಡಮಾರುತವನ್ನ ನೋಡಿದೆ. ಈಗಾಗಲೇ ಕೊರೊನಾದಿಂದಾಗಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದಲ್ಲಿ ಬುಧವಾರ ಅಪ್ಪಳಿಸಿದ ನಿಸರ್ಗ ಸೈಕ್ಲೋನ್ ಮೂವರನ್ನು ಬಲಿ ತೆಗೆದುಕೊಂಡಿದ್ದು, ಸ್ಲಮ್ಗಳಲ್ಲಿ ವಾಸಿಸುತ್ತಿದ್ದ ಜನರ ಬದುಕನ್ನ ಅಲ್ಲೋಲ ಕಲ್ಲೋಲ ಮಾಡಿ ಹೋಗಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ನಿಸರ್ಗ ಚಂಡಮಾರುತ, ಗಂಟೆಗೆ 120 ಕಿ.ಮೀ ವೇಗದಲ್ಲಿ ಮಹಾರಾಷ್ಟ್ರಕ್ಕೆ ಅಪ್ಪಳಿಸಿತ್ತು. ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ಸೈಕ್ಲೋನ್, ಮೂವರನ್ನು ಬಲಿ ಪಡೆದಿತ್ತು. ರಾಯಗಡ ಜಿಲ್ಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಿದ್ದು 58 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನು ಪುಣೆಯಲ್ಲಿ ಮನೆಯ ಛಾವಣಿ ಹಾಗೂ ಗೋಡೆ ಕುಸಿದು ಬಿದ್ದು, 65 ವರ್ಷದ ವೃದ್ಧೆ ಹಾಗೂ 52 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲವೆಡೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ.
ಅಲಿಬಾಗ್ ಪ್ರದೇಶದ ಬಳಿಕ ಇಂದು ಮುಂಜಾನೆ ಪಶ್ಚಿಮ ವಿದರ್ಭ ಪ್ರದೇಶವನ್ನು ಚಂಡಮಾರುತ ಹಾದುಹೋಗಿದ್ದು, ಇಂದು ಸಂಜೆ ಪೂರ್ವ - ಈಶಾನ್ಯ ದಿಕ್ಕಿನೆಡೆ ಚಲಿಸಿ, ಕಡಿಮೆ ಒತ್ತಡದ ಪ್ರದೇಶದಲ್ಲಿ ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಚಂಡಮಾರುತ ಅಪ್ಪಳಿಸಿ ಹೋಗಿರುವ ಹಿನ್ನೆಲೆ ಥಾಣೆ, ಕಲಾ ನಗರ ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ರತ್ನಗಿರಿ ಸೇರಿದಂತೆ ಸೈಕ್ಲೋನ್ ಪೀಡಿತ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ದುರಸ್ತಿ ಕಾರ್ಯಾಚರಣೆಯಲ್ಲಿ ತೊಡಗಿದೆ. ಇಂದು ಮುಂಜಾನೆ ಮುಂಬೈನ ಮೆರೈನ್ ಡ್ರೈವ್ ಬಳಿ ಜನರು ವಾಕಿಂಗ್ ಮಾಡಲು ಬಂದಿರುವ ದೃಶ್ಯಗಳು ಸಹ ಕಂಡುಬಂದಿವೆ.