ಹೈದರಾಬಾದ್ : 2020ರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಜತೆಗೆ ಅನೇಕ ರಾಜಕೀಯ ಬಿಕ್ಕಟ್ಟುಗಳು ಸಹ ನಡೆದಿವೆ. ರಾಜಸ್ಥಾನ, ಮಧ್ಯಪ್ರದೇಶ, ಮಣಿಪುರದ ರಾಜಕೀಯ ಹೈಡ್ರಾಮಾಗಳ ಪಕ್ಷಿನೋಟ ಇಲ್ಲಿದೆ..
ರಾಜ'ಸ್ಥಾನ' ಬಿಕ್ಕಟ್ಟು : ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದರು. ಇದಕ್ಕೆ ತಕ್ಕಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಭೇಟಿ ಮಾಡಲು ಶಾಸಕರನ್ನು ಕರೆದುಕೊಂಡು ಡಿಸಿಎಂ ಸಚಿನ್ ಪೈಲಟ್ ದೆಹಲಿಗೆ ತೆರಳಿದ್ದರು. ಕೈ ಶಾಸಕರಲ್ಲದೇ ಕೆಲ ಪಕ್ಷೇತರ ಶಾಸಕರು ಕೂಡ ಸರ್ಕಾರಕ್ಕೆ ಬೆಂಬಲ ಸೂಚಿಸಲು ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು.
ಶಾಸಕರಿಗೆ ಆಮಿಷವೊಡ್ಡುವ ಮೂಲಕ ರಾಜ್ಯದ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ರಾಜಸ್ಥಾನದ 24ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಶುಕ್ರವಾರ ರಾತ್ರೋರಾತ್ರಿ ಜಂಟಿ ಹೇಳಿಕೆ ಹೊರಡಿಸಿದ್ದರು. ಬಳಿಕ ಪ್ರತಿಕ್ರಿಯೆ ನೀಡಿದ್ದ ಸಿಎಂ ಗೆಹ್ಲೋಟ್, ಮಧ್ಯಪ್ರದೇಶದ ಕಮಲನಾಥ್ ಸರ್ಕಾರವನ್ನು ಉರುಳಿಸಿದಂತೆಯೇ ಬಿಜೆಪಿಯು ರಾಜಸ್ಥಾನ ಸರ್ಕಾರವನ್ನೂ ಕೆಡವಲು ಮುಂದಾಗಿದೆ ಎಂದು ಆರೋಪಿಸಿದ್ದರು. ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಇದು ಒಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವಿನ ಅಧಿಕಾರ ಗುದ್ದಾಟದ ಪರಿಣಾಮ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಯಿತು. ಆಡಳಿತ ಪಕ್ಷದ ಶಾಸಕರು ಐಷಾರಾಮಿ ಹೋಟೆಲ್‌ಗೆ ಸ್ಥಳಾಂತರಗೊಂಡರು.
ಗೆಹ್ಲೋಟ್ ಅವರೊಂದಿಗೆ ಶಾಸಕರನ್ನು ನಗರದಿಂದ 20 ಕಿ.ಮೀ ದೂರದಲ್ಲಿರುವ ಜೈಪುರ-ದೆಹಲಿ ಹೆದ್ದಾರಿಯಲ್ಲಿರುವ ಐಷಾರಾಮಿ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು. ಸ್ಪೀಕರ್ ಸಿ ಪಿ ಜೋಶಿ 18 ಕಾಂಗ್ರೆಸ್ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದರು. ವಿಧಾನಸಭಾ ಸ್ಪೀಕರ್ ಅವರು ನೀಡಿರುವ ಅನರ್ಹತೆ ನೋಟಿಸ್‌ಗಳನ್ನು ಪ್ರಶ್ನಿಸಿ ಬಂಡಾಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಮತ್ತು ಇತರ 18 ಶಾಸಕರು ಹೈಕೋರ್ಟ್‌ಗೆ ತೆರಳಿದರು.
ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸಚಿನ್ ಪೈಲಟ್ ಬಣದ ಶಾಸಕನ ನಡುವೆ ನಡೆದಿದೆ ಎನ್ನಲಾದ ಚರ್ಚೆಯ ಮೂರು ಆಡಿಯೋ ತುಣುಕುಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿತು. ರಾಜಸ್ಥಾನ್ ಹೈಕೋರ್ಟ್, ಸ್ಪೀಕರ್ ಸಿ ಪಿ ಜೋಶಿ ಅವರು ಜುಲೈ 24ರವರೆಗೆ 19 ಬಂಡಾಯ ಶಾಸಕರಿಗೆ ನೀಡಿದ ಅನರ್ಹತೆ ನೋಟಿಸ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿತು.
ಈ ಆದೇಶದ ವಿರುದ್ಧ ರಾಜಸ್ಥಾನ್ ಸ್ಪೀಕರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಆದರೆ, ಸುಪ್ರೀಂಕೋರ್ಟ್ ಈ ಮನವಿ ತಿರಸ್ಕರಿಸಿತು. ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಶಾಸಕರ ವಿರುದ್ಧ ಅನರ್ಹತೆ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿತು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದನ್ನ ರಾಷ್ಟ್ರಪತಿಗಳ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದರು.
ಬಹುಮತ ಸಾಬೀತಪಡಿಸಲು ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾರನ್ನ ಒತ್ತಾಯಿಸಿ, ರಾಜಭವನದ ಮುಂದೆ ಕಾಂಗ್ರೆಸ್ ಶಾಸಕರು ಪ್ರತಿಭಟಿಸಿದರು. ಇದಾದ ಬಳಿಕ ರೆಸಾರ್ಟ್ಗೆ ತೆರಳಿದರು. ಇದರ ಬೆನ್ನಲ್ಲೇ ರಾತ್ರಿ ಹೋಟೆಲ್ನಲ್ಲೇ ಗೆಹ್ಲೋಟ್ ತುರ್ತು ಸಚಿವ ಸಂಪುಟ ಸಭೆ ನಡೆಸಿದರು.
ರಾಜಸ್ಥಾನ ರಾಜ್ಯಪಾಲರು ಆಗಸ್ಟ್ 14ರಿಂದ ಸದನ ಅಧಿವೇಶನಕ್ಕೆ ಅನುಮತಿ ನೀಡಿದರು. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಸ್ಥಾನ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಿತು. ಇದರಲ್ಲಿ ಅಶೋಕ್ ಗೆಹ್ಲೋಟ್ ಯಶಸ್ವಿಯಾದರು.
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು : ಎಲ್ಲಾ ರಾಜ್ಯಗಳಲ್ಲಿನ ರಾಜಕೀಯ ಪರಿಸ್ಥಿತಿಯಂತೆ ಮದ್ಯಪ್ರದೇಶದಲ್ಲೂ ರಾಜಕೀಯ ಬಿಕ್ಕಟ್ಟಿದೆ. ಮಾರ್ಚ್ 20ರಂದು ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಕಮಲನಾಥ್ ರಾಜೀನಾಮೆ ನೀಡುವ ಮೂಲಕ ಒಂದು ಹಂತದ ರಾಜಕೀಯ ಬಿಕ್ಕಟ್ಟು ಅಂತ್ಯವಾಯಿತು. ಇದಾದ ನಂತರ ಮಾರ್ಚ್ 23ರಂದು ಮತ್ತೆ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ, ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಿದರು. ಈ ರಾಜಕೀಯ ಬಿಕ್ಕಟ್ಟಿಗೆ ಕಾರಣ ಜೋತಿರಾದಿತ್ಯ ಸಿಂಧ್ಯಾ.
ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಸೃಷ್ಟಿ ಹೇಗೆ? : ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲವಾಗಿದ್ದ ಜೋತಿರಾದಿತ್ಯ ಸಿಂಧ್ಯಾ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷವನ್ನು ತೊರೆದಾಗ, ಅಲ್ಲಿ ಬಿಕ್ಕಟ್ಟು ಆರಂಭವಾಯಿತು. ಹಲವು ಅಸ್ಥಿರತೆಗಳ ನಡುವೆ ಸುಪ್ರೀಂಕೋರ್ಟ್ ವಿಧಾನಸಭೆಯಲ್ಲಿ ಅವಿಶ್ವಾಸ ನಿಲುವಳಿ ಸಾಬೀತುಪಡಿಸುವಂತೆ ಕಮಲನಾಥ್ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಜೋತಿರಾದಿತ್ಯ ಸಿಂಧ್ಯಾ ನಾಯಕತ್ವದಲ್ಲಿದ್ದ ಕಾಂಗ್ರೆಸ್‌ನ 16 ಬಂಡಾಯ ಶಾಸಕರ ರಾಜೀನಾಮೆ ಅಂಗೀಕಾರವಾಯಿತು. ಇದಕ್ಕೂ ಮೊದಲು ಆರು ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಒಟ್ಟು 22 ಮಂದಿ ಶಾಸಕರು ಕಮಲನಾಥ್ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದರು. ವಿಶ್ವಾಸಮತ ಕೋರುವ ಮೊದಲೇ ಕಮಲನಾಥ್ ರಾಜೀನಾಮೆ ಸಲ್ಲಿಸಿದರು.
16 ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಎನ್ ಪಿ ಪ್ರಜಾಪತಿ ಅಂಗೀಕರಿಸಿದ ನಂತರ ಕಮಲನಾಥ್ ಸರ್ಕಾರದಲ್ಲಿನ ಶಾಸಕ ಸಂಖ್ಯೆ 92ಕ್ಕೆ ಇಳಿಯಿತು. ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 222ಕ್ಕೆ ಇಳಿದಿದ್ದು, ಅಲ್ಲಿ ಸರ್ಕಾರ ರಚಿಸಬೇಕಾದ್ರೆ ಬೇಕಾದ ಒಟ್ಟು ಸದಸ್ಯರ ಸಂಖ್ಯೆ 104ಕ್ಕೆ ಇಳಿಕೆಯಾಯಿತು. ಬಿಜೆಪಿ ಬೆಂಬಲಿಗರ ಸಂಖ್ಯೆ 107 ಇದ್ದ ಕಾರಣ ಶಿವರಾಜ್ ಸಿಂಗ್ ಚೌಹಾಣ್ ಅನಾಯಾಸವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.
ಮಣಿಪುರ ರಾಜಕೀಯ ಹೈಡ್ರಾಮಾ : ಮುಖ್ಯಮಂತ್ರಿ ನೊಂಗ್ಥೊಂಬಮ್ ಬಿರೇನ್ ನೇತೃತ್ವದ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ವಿಶ್ವಾಸ ಮತಯಾಚನೆ ಗೆದ್ದ ಕೆಲವೇ ಗಂಟೆಗಳ ನಂತರ ಮಣಿಪುರದ ಆರು ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದರು.
ಪ್ರಮುಖ ಮಿತ್ರ ಎನ್‌ಪಿಪಿಯ ನಾಲ್ವರು, ಬಿಜೆಪಿಯ ಮೂವರು, ಒಂಟಿಯಾಗಿರುವ ತೃಣಮೂಲ ಕಾಂಗ್ರೆಸ್ ಶಾಸಕ ಮತ್ತು ಸ್ವತಂತ್ರ ಶಾಸಕರು ಸೇರಿ ಒಂಬತ್ತು ಶಾಸಕರು ಬೆಂಬಲ ಹಿಂತೆಗೆದುಕೊಂಡರು. ನಂತರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಸರ್ಕಾರ ಗೊಂದಲಕ್ಕೆ ಸಿಲುಕಿತು.
ಮಣಿಪುರದ ಬಿರೇನ್ ಸಿಂಗ್ ಸರ್ಕಾರವು 2020ರ ಆಗಸ್ಟ್ 1ರಂದು ವಿಶ್ವಾಸ ಮತಯಾಚನೆ ಗೆಲ್ಲುವ ಮೂಲಕ ಈಶಾನ್ಯ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಅಧಿಕಾರ ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.