ಸುಳ್ಳು ಸುದ್ದಿ ಅಥವಾ ಫೇಕ್ ನ್ಯೂಸ್ ಹಾವಳಿ ಈಗೀಗ ವಿಪರೀತ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾ ಬಂದ ಮೇಲೆ ಈ ಫೇಕ್ ನ್ಯೂಸ್ ಹರಡುವಿಕೆ ತುಂಬಾ ಸುಲಭವಾಗಿ ಬಿಟ್ಟಿದೆ. ಸರ್ಕಾರಗಳು ಹಾಗೂ ತನಿಖಾ ಸಂಸ್ಥೆಗಳಿಗೆ ಈ ಸುಳ್ಳು ಸುದ್ದಿಯ ಮೂಲ ಹುಡುಕುವುದು ಹಾಗೂ ಅದು ಮತ್ತಷ್ಟು ಹರಡಿ ಸಮಾಜದಲ್ಲಿ ಅಶಾಂತಿ ಉಂಟಾಗದಂತೆ ಮಾಡುವುದೇ ಒಂದು ದೊಡ್ಡ ತಲೆನೋವಾಗುತ್ತಿದೆ. ಇಂಥದೊಂದು ಸುಳ್ಳು ಸುದ್ದಿಯ ಹಾವಳಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ವಿಪರೀತವಾಗಿ ವ್ಯಾಪಿಸಿದೆ. ಫೇಕ್ ನ್ಯೂಸ್ ವಿರುದ್ಧ ವಿಶ್ವದ ವಿಭಿನ್ನ ರಾಷ್ಟ್ರಗಳು ಯಾವೆಲ್ಲ ಕಾನೂನು ಕ್ರಮಗಳನ್ನು ಜಾರಿ ಮಾಡಿವೆ ಎಂಬ ಕುತೂಹಲಕಾರಿ ಅಂಶಗಳನ್ನು ತಿಳಿಯೋಣ.
![ಫೇಕ್ ನ್ಯೂಸ್ ಹಾವಳಿ](https://etvbharatimages.akamaized.net/etvbharat/prod-images/1_1911newsroom_1605808558_1069.jpg)
ಫ್ರಾನ್ಸ್: 1881 ರ ಮಾಧ್ಯಮ ಸ್ವಾತಂತ್ರ್ಯ ಕಾನೂನಿನಡಿ ಫ್ರಾನ್ಸ್ನಲ್ಲಿ ಫೇಕ್ ನ್ಯೂಸ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಪ್ರಕಟಿಸಿ ಸಾರ್ವಜನಿಕ ಶಾಂತಿಯನ್ನು ಕದಡುವುದು ಕಾನೂನು ಬಾಹಿರ ಕೃತ್ಯವೆಂದು ಪರಿಗಣಿಸಲಾಗಿದೆ. ವದಂತಿಯನ್ನು ಹರಡುವುದು, ತಿರುಚಿದ ಸುದ್ದಿಗಳನ್ನು ಪ್ರಕಟಿಸುವುದು, ಯಾವುದೋ ಗೊತ್ತಿಲ್ಲದ ಮೂಲಗಳನ್ನು ಉಲ್ಲೇಖಿಸಿ ಸುಳ್ಳು ಸುದ್ದಿ ಹರಡುವುದನ್ನು ನಿಷೇಧಿಸಲಾಗಿದೆ.
2019 ರಲ್ಲಿ ಅಂಗೀಕರಿಸಲಾದ ಕಾಯ್ದೆಯನ್ವಯ ಫೇಕ್ ನ್ಯೂಸ್ ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ಯಾವುದೇ ಮಾಧ್ಯಮಗಳಲ್ಲಿ ಬಿತ್ತರಿಸಲಾದ ಸುಳ್ಳು ಸುದ್ದಿಗಳನ್ನು ತಕ್ಷಣ ತೆಗೆದು ಹಾಕುವ ಹಾಗೂ ಅದನ್ನು ಪ್ರಕಟಿಸುವ ಮಾಧ್ಯಮಗಳನ್ನು ನಿಷೇಧಿಸುವ ಅಧಿಕಾರವನ್ನು ತನಿಖಾಧಿಕಾರಿಗಳಿಗೆ ನೀಡಲಾಗಿದೆ.
![ಫೇಕ್ ನ್ಯೂಸ್ ಹಾವಳಿ](https://etvbharatimages.akamaized.net/etvbharat/prod-images/2_1911newsroom_1605808558_213.jpg)
ಸಿಂಗಾಪುರ: ಆನ್ಲೈನ್ ಮೂಲಕ ಸುಳ್ಳು ಸುದ್ದಿಯನ್ನು ಬಿತ್ತರಿಸುವುದು ಕ್ರಿಮಿನಲ್ ಚಟುವಟಿಕೆ ಎಂದು ಮೇ 2019 ರಲ್ಲಿ ಸಿಂಗಾಪುರ ಕಾನೂನು ರೂಪಿಸಿದೆ. ಸಿಂಗಾಪುರ ಪಾರ್ಲಿಮೆಂಟ್ನಲ್ಲಿ ಪಾಸ್ ಮಾಡಲಾಗಿರುವ ಈ ಕಾನೂನು ಸಾಕಷ್ಟು ಬಿಗಿಯಾಗಿದೆ. ಸುಳ್ಳು ಸುದ್ದಿ ಹರಡುವವರನ್ನು ಬಂಧಿಸಿ ಜೈಲಿಗಟ್ಟುವ ಹಾಗೂ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಲಾಗಿದೆ.
ಯುನೈಟೆಡ್ ಕಿಂಗಡಮ್: ಸುಳ್ಳು ಸುದ್ದಿ ಹರಡುವಿಕೆಯನ್ನು ನಿರ್ಬಂಧಿಸುವುದು ಹೇಗೆಂದು ಸುಮಾರು 18 ತಿಂಗಳುಗಳ ಕಾಲ ಚಿಂತನ ಮಂಥನ ನಡೆಸಿದ ಯುಕೆ ಸರ್ಕಾರ ಜುಲೈ 29, 2018 ರಂದು ವರದಿಯೊಂದನ್ನು ಪ್ರಕಟಿಸಿದರು. ಇದರ ಪ್ರಕಾರ ಸುಳ್ಳು ಸುದ್ದಿ ಪ್ರಕಟಿಸುವುದನ್ನು ಕ್ರಿಮಿನಲ್ ಚಟುವಟಿಕೆ ಎಂದು ಪರಿಗಣಿಸಲಾಗಿದೆ.
![ಫೇಕ್ ನ್ಯೂಸ್ ಹಾವಳಿ](https://etvbharatimages.akamaized.net/etvbharat/prod-images/3_1911newsroom_1605808558_803.jpg)
ಸ್ವೀಡನ್: ಸುಳ್ಳು ಸುದ್ದಿ ತಡೆಗೆ ಈ ದೇಶದಲ್ಲಿ ಯಾವುದೇ ವಿಶೇಷ ಕಾನೂನು ರೂಪಿಸಲಾಗಿಲ್ಲ. ಇಲ್ಲಿನ ವೃತ್ತಿನಿರತ ಪತ್ರಕರ್ತರು ತಾವ್ಯಾರೂ ಸುಳ್ಳು ಸುದ್ದಿ ಪ್ರಕಟಿಸುವುದಿಲ್ಲ ಎಂದು ಸ್ವತಃ ತಾವಾಗಿಯೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದಾರೆ. ಇಲ್ಲಿನ ಮಾಧ್ಯಮಗಳು ನೈತಿಕವಾಗಿ ಸುದ್ದಿ ಪ್ರಕಟಿಸುವ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ನಿಭಾಯಿಸುತ್ತಿವೆ.
ಜರ್ಮನಿ: 2017 ರಲ್ಲಿ ಜರ್ಮನಿಯು ನೆಟ್ವರ್ಕ್ ಎನ್ಫೋರ್ಸ್ಮೆಂಟ್ ಕಾಯ್ದೆಯನ್ನು ಜಾರಿಗೆ ತಂದಿತು. ಸೋಶಿಯಲ್ ಮೀಡಿಯಾ ಕುರಿತಂತೆ ಈ ಕಾಯ್ದೆ ಹೊಸ ಯಾವುದೇ ನಿಬಂಧನೆಗಳನ್ನು ವಿಧಿಸಲಿಲ್ಲ. ಆದರೆ ಮೊದಲೇ ಇದ್ದ ಕಾನೂನುಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಆ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸುವ ಕ್ರಮಗಳನ್ನು ಈ ಕಾಯ್ದೆಯ ಮೂಲಕ ಜಾರಿಗೊಳಿಸಲಾಯಿತು.
ಕೆನಡಾ: ಕೆನಡಾ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಹಾಗೂ ಅದೇ ಕಾಲಕ್ಕೆ ದೇಶದ ಸಾರ್ವಭೌಮತ್ವ ಹಾಗೂ ಚುನಾವಣೆಗಳ ಮೇಲೆ ಆನ್ಲೈನ್ ಬೆದರಿಕೆಗಳು ಬಾರದಂತೆ ಕಾಪಾಡಲು ಕಟಿಬದ್ಧವಾಗಿದೆ ಎಂದು ದೇಶವು 2019 ರಲ್ಲಿ ಘೋಷಿಸಿತು.
ಇಟಲಿ: ಜನೇವರಿ 18, 2018 ರಂದು ಇಟಲಿ ಸರ್ಕಾರವು ಹೊಸ ಆನ್ಲೈನ್ ಪೋರ್ಟಲ್ ಒಂದನ್ನು ಆರಂಭಿಸಿತು. ಯಾರಾದರೂ ಯಾವುದಾದರೂ ಸುಳ್ಳು ಸುದ್ದಿ ಹರಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಈ ಪೋರ್ಟಲ್ ಮೂಲಕ ಪೊಲೀಸರಿಗೆ ದೂರು ನೀಡುವ ವ್ಯವಸ್ಥೆಯನ್ನು ಈ ಮೂಲಕ ಜಾರಿಗೆ ತರಲಾಯಿತು.
![ಫೇಕ್ ನ್ಯೂಸ್ ಹಾವಳಿ](https://etvbharatimages.akamaized.net/etvbharat/prod-images/5_1911newsroom_1605808558_632.jpg)
ರಶಿಯಾ: ಫೇಕ್ ನ್ಯೂಸ್ ತಡೆಗಟ್ಟಲು ರಶಿಯಾ ಮಾರ್ಚ್ 2019 ರಲ್ಲಿ ಹೊಸ ಕಾನೂನು ಜಾರಿ ಮಾಡಿತು. ನಿಜವಾದ ಸುದ್ದಿ ಹಾಗೂ ಸುಳ್ಳು ಸುದ್ದಿಯನ್ನು ಸೂಕ್ತವಾಗಿ ಈ ಕಾನೂನಿನ ಮೂಲಕ ವ್ಯಾಖ್ಯಾನಿಸಲಾಗಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಇದರಲ್ಲಿದೆ.
ಚೀನಾ: ಸುಳ್ಳು ಸುದ್ದಿ ಹರಡುವಿಕೆ ತಡೆಗಟ್ಟುವ ಕುರಿತಾಗಿ ಚೀನಾ ವಿಶ್ವದಲ್ಲೇ ಅತಿ ಬಿಗಿಯಾದ ಕಾನೂನುಗಳನ್ನು ಹೊಂದಿದೆ. ಆಧಾರ ರಹಿತ ಸುದ್ದಿಗಳನ್ನು ಪ್ರಕಟಿಸುವುದು ಕ್ರಿಮಿನಲ್ ಕೃತ್ಯ ಎಂದು ಚೀನಾ ಸರ್ಕಾರ 2016 ರಲ್ಲೇ ಕಾನೂನು ರೂಪಿಸಿದೆ. ಇನ್ನು ನೋಂದಾಯಿತಲ್ಲದ ಸುದ್ದಿ ಸಂಸ್ಥೆಗಳು ಪ್ರಕಟಿಸುವ ಸುದ್ದಿಗಳನ್ನು ಯಾವುದೇ ಸೋಶಿಯಲ್ ಮೀಡಿಯಾದಲ್ಲೂ ಮರು ಹಂಚಿಕೆ ಮಾಡಿಕೊಳ್ಳುವಂತಿಲ್ಲ.