ಜೈಪುರ: ಜೂನ್ 18 ರಂದು ಇಲ್ಲಿ ನಡೆದ 40 ಲಕ್ಷ ರೂ. ದರೋಡೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಂಪನಿಯ ಉದ್ಯೋಗಿಯೊಬ್ಬನಿಂದ 40 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ ಪ್ರಕರಣ ಇದಾಗಿತ್ತು. ಆದರೆ ಕಂಪನಿ ಉದ್ಯೋಗಿಯೇ ಪ್ರಕರಣದಲ್ಲಿ ಭಾಗಿಯಾಗಿದ್ದು, ದರೋಡೆ ನಾಟಕದ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಸ್ಥಳೀಯ ಶ್ಯಾಮ್ ಅಸೋಸಿಯೇಟ್ ಎಂಬ ಕಂಪನಿಯ ಗುಮಾಸ್ತ ಯೋಗೇಂದ್ರ ಕುಮಾರ ಎಂಬುವರು ಜೈಪುರ, ಬಾಂದಿಕುಯಿ, ಮಹವಾ ಮತ್ತು ಥಾನಾಗಾಜಿ ಪಟ್ಟನಗಳಿಂದ ಕಂಪನಿಯ 40 ಲಕ್ಷ ರೂ. ಕಲೆಕ್ಷನ್ ಮಾಡಿಕೊಂಡು ತಮ್ಮ ವಾಹನದಲ್ಲಿ ಜೈಪುರ ಕಡೆಗೆ ಹೊರಟಿದ್ದರು. ವಾಹನವನ್ನು ಕಂಪನಿಯ ಡ್ರೈವರ್ ಜನಕ ಸಿಂಗ್ ಎಂಬಾತ ಚಾಲನೆ ಮಾಡುತ್ತಿದ್ದ. ಸಂಜೆ 6 ಗಂಟೆ ಸುಮಾರಿಗೆ ಕಾರು ಬಿಲವಾಡಿ ಅರಣ್ಯ ಪ್ರದೇಶದ ದಾರಿ ಪ್ರವೇಶಿಸುತ್ತಿದ್ದಂತೆಯೇ ಹಿಂದಿನಿಂದ ಬಂದ ಆಲ್ಟೊ ಕಾರೊಂದು ಓವರಟೇಕ್ ಮಾಡಿ ಈ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿತು.
ಆಲ್ಟೊ ಕಾರಿನಲ್ಲಿದ್ದ ಮುಖಕ್ಕೆ ಮಾಸ್ಕ್ ಹಾಕಿದ್ದ ದುಷ್ಕರ್ಮಿಗಳು ಇವರ ಕಾರಿನಲ್ಲಿದ್ದ 40 ಲಕ್ಷ ರೂ.ಗಳ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು. ಆದರೆ ಪೊಲೀಸರಿಗೆ ಪ್ರಕರಣದಲ್ಲಿ ಏನೋ ಸಂಶಯ ಬಂದು ವಿಚಾರಣೆ ನಡೆಸಿದಾಗ ಚಾಲಕ ಜನಕ್ ಸಿಂಗ್ನದೇ ಕೈವಾಡವಿರುವುದು ಬೆಳಕಿಗೆ ಬಂದಿತು. ಚಾಲಕ ಜನಕ್ ಸಿಂಗ್, ಕಂಪನಿಯ ಇನ್ನೋರ್ವ ಉದ್ಯೋಗಿ ಅರ್ಜುನ್ ಎಂಬಾತನೊಂದಿಗೆ ಸೇರಿ ದರೋಡೆಯ ಸಂಚು ರೂಪಿಸಿದ್ದ ಎಂಬುದು ಬೆಳಕಿಗೆ ಬಂದಿದೆ.
ಬಂಧಿತ ನಾಲ್ವರು ಆರೋಪಿಗಳಿಂದ 17 ಲಕ್ಷ ರೂ. ನಗದು ಹಾಗೂ ದರೋಡೆಗೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.