ನ್ಯೂಯಾರ್ಕ್: ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದು, ವಿಶ್ವಕ್ಕೆ ನಾವು ಶಾಂತಿ ಮಂತ್ರದ ಬುದ್ಧನನ್ನು ನೀಡಿದ್ದೇವೆ ಹೊರತಾಗಿ ಯುದ್ಧವನ್ನಲ್ಲ ಎಂದು ಹೇಳಿದ್ದಾರೆ.
ಅಭಿವೃದ್ಧಿಯ ಕಾರ್ಯಗಳಿಂದ ಭಾರತ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದು, ವಿಶ್ವವನ್ನೇ ಬೇರ್ಪಡಿಸುತ್ತಿರುವ ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಪಾಕಿಸ್ತಾನದ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಒಂದು ದೇಶ ಮಾತ್ರ ಭಯೋತ್ಪಾದನೆಯ ಕೇಂದ್ರಬಿಂದುವಾಗಿದ್ದು, ಅದರ ಮಣ್ಣಿನಿಂದಲೇ ಭಯೋತ್ಪಾದನೆ ಉದ್ಭವವಾಗುತ್ತಿದ್ದು, ಆ ದೇಶ ಅದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಭಾರತ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಬ್ ಕಾ ಸಾಥ್,ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ ಎಂಬ ಘೋಷ ವಾಕ್ಯದೊಂದಿಗೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದ ಮೋದಿ, ಕಳೆದ ಐದು ವರ್ಷದಲ್ಲಿ ನಾವು ಭಾರತದಲ್ಲಿ ಬರೋಬ್ಬರಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದೇವೆ. ದೇಶದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಾರ್ಯಾಚರಣೆ ಆರಂಭಿಸಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಅಭೂತಪೂರ್ವ ಮತಗಳೊಂದಿಗೆ ನನ್ನ ಹಾಗೂ ನನ್ನ ಸರ್ಕಾರವನ್ನ ಭಾರೀ ಬಹುಮತದೊಂದಿಗೆ ಗೆಲ್ಲಿಸಿಕೊಟ್ಟಿದ್ದಕ್ಕಾಗಿ ಇವತ್ತು ನಾನು ಇಲ್ಲಿ ಭಾಷಣ ಮಾಡುತ್ತಿದ್ದೇನೆ ಎಂದ ಮೋದಿ, ತಮ್ಮ ಭಾಷಣದ ಮಧ್ಯೆ ವಿಶ್ವ ಗುರು ವಿವೇಕಾನಂದ ಹಾಗೂ ಭಾರತದ ಕವಿ ಕಾನಿಯನ್ ಪುಂಗುಂದ್ರನಾರ್ ಅವರನ್ನ ನೆನಪಿಸಿಕೊಂಡರು.