ನವದೆಹಲಿ: ಭಾರತಕ್ಕೆ ಮೇಡ್ ಇನ್ ಇಂಡಿಯಾಗಿಂತ ಮೇಡ್ ಇನ್ ಗ್ಲೋಬಲ್ ಅನಿವಾರ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) 125 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಡೆದ ವಾರ್ಷಿಕ ಸಭೆಯನ್ನು ಉದ್ದೇಶಿಸಿ ವಿಡಿಯೋ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ ಭಾರತ ಕಟ್ಟಲು ಸರ್ಕಾರ ಯಾವಾಗಲೂ ನಿಮ್ಮ ಜೊತೆಯಲ್ಲಿಯೇ ಇರುತ್ತದೆ. ದೇಶದ ತಾಕತ್ತಿನ ಮೇಲೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಹೇಳಿದ ಆ ಐ ಸೂತ್ರಗಳು:
ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಇಂಟೆಂಟ್ (ಆಶಯ), ಇನ್ಕ್ಲೂಷನ್ (ಒಳಗೊಳ್ಳುವಿಕೆ), ಇನ್ವೆಸ್ಟ್ಮೆಂಟ್ (ಹೂಡಿಕೆ), ಇನ್ಫ್ರಾಸ್ಟ್ರಕ್ಚರ್ (ಮೂಲಸೌಕರ್ಯ), ಇನ್ನೋವೇಷನ್ (ಸಂಶೋಧನೆ) ಸೇರಿದ 5-ಐ (5-I) ಸೂತ್ರವನ್ನು ಮುಂದಿಟ್ಟ ಪ್ರಧಾನಿ ಮೋದಿ ಇದನ್ನು ಬಳಸಿಕೊಂಡು ದೇಶವನ್ನು ಕಟ್ಟಬೇಕಿದೆ. ಈಗ ವಿಶ್ವ ನಂಬಿಕಸ್ಥ ಸ್ನೇಹಿತನಿಗಾಗಿ ಹುಡುಕಾಡುತ್ತಿದ್ದು, ಈ ಸ್ನೇಹಿತನಾಗುವತ್ತ ದೇಶ ಮುಂದುವರೆದಿದೆ. ಈಗಾಗಲೇ 150 ರಾಷ್ಟ್ರಗಳಿಗೆ ಸಂಕಷ್ಟದ ಸ್ಥಿತಿಯಲ್ಲಿ ಸಹಾಯ ಮಾಡಿದೆ ಎಂದಿದ್ದಾರೆ.
'ಕೊರೊನಾ ಕಾಲದಲ್ಲೂ ದೇಶದ ಆರ್ಥಿಕತೆ ಸ್ಥಿರವಾಗಿದೆ':
ಕೊರೊನಾದ ಸಮಯದಲ್ಲೂ ಕೂಡಾ ನಮ್ಮ ದೇಶದ ಆರ್ಥಿಕತೆ ಸ್ಥಿರವಾಗಿದೆ. ಈ ವೇಳೆ ಸರ್ಕಾರ ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದೆ. ಈ ಕ್ರಮಗಳು ದೀರ್ಘಕಾಲದ ಅಭಿವೃದ್ಧಿಗೆ ಸಹಕಾರಿಯಾಗಲಿವೆ ಎಂದ ಮೋದಿ ಕೊರೊನಾ ಸಂಕಷ್ಟದಲ್ಲಿ 74 ಕೋಟಿ ಮಂದಿಗೆ ಪಡಿತರವನ್ನು ವಿತರಣೆ ಮಾಡಿದ್ದೇವೆ. 8 ಕೋಟಿಗೂ ಹೆಚ್ಚು ಮಂದಿಗೆ ಅಡುಗೆ ಸಿಲಿಂಡರ್ ವಿತರಿಸಿ, ಕಾರ್ಮಿಕ ಕ್ಷೇತ್ರಕ್ಕೆ ಸಹಕಾರ ನೀಡಿದ್ದೇವೆ, ರೈತರಿಗೂ ಕೂಡಾ ಸಹಾಯಹಸ್ತ ಚಾಚಿದ್ದು, ಎಪಿಎಂಸಿ ಕಾಯ್ದೆಯ ಮೂಲಕ ಅವರ ಸ್ವಾತಂತ್ರವನ್ನು ರಕ್ಷಣೆ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಬೇರೆ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಪ್ರಾಣ ರಕ್ಷಿಸುವುದರ ಜೊತೆಗೆ ಆರ್ಥಿಕತೆಯಲ್ಲಿ ಸ್ಥಿರತೆ ಸಾಧಿಸುವ ಕೆಲಸ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬ ಉದ್ಯಮಿಗೂ ಕೂಡಾ ಅಭಿನಂದನೆ. ಭಾರತ ಖಂಡಿತವಾಗಿಯೂ ತನ್ನ ಆರ್ಥಿಕತೆಯನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ.