ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರ ಈಗಾಗಲೇ ರಂಗೇರಿದ್ದು, ವಿವಿಧ ಮುಖಂಡರು ಕಣಕ್ಕಿಳಿದಿದ್ದು, ಈಗಾಗಲೇ ಪ್ರಚಾರ ಸಭೆ ನಡೆಸ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣಾ ಕಣಕ್ಕೆ ಲಗ್ಗೆ ಹಾಕಲಿದ್ದಾರೆ.
ಭಾರತೀಯ ಜನತಾ ಪಾರ್ಟಿ ತಿಳಿಸಿರುವ ಪ್ರಕಾರ ಪ್ರಧಾನಿ ನರೇಂದ್ರ ಮೋದಿ, 12 ಪ್ರಚಾರ ಸಭೆಗಳಲ್ಲಿ ಭಾಗಿಯಾಗಲಿದ್ದು, ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ನಾಳೆ ಸಸಾರಾಮ್, ಭಾಗಲ್ಪುರ್ ಹಾಗೂ ಗಯಾಗಳಲ್ಲಿ ನಮೋ ರ‍್ಯಾಲಿ ನಡೆಸಲಿದ್ದಾರೆ. ಇದಾದ ಬಳಿಕ ಇದೇ ತಿಂಗಳ 28ರಂದು ದರ್ಬಾಂಗ್, ಮುಜಾಫರ್ಪುರ್ ಹಾಗೂ ಪಾಟ್ನಾಗಳಲ್ಲಿ ಪ್ರಚಾರ ನಡೆಸಲಿದ್ದು, ನವೆಂಬರ್ 3ರಂದು ಚಾಪ್ರಾ, ಈಸ್ಟ್ ಚಂಪಾರಣ್ಯ ಹಾಗೂ ಸಮಸ್ತಿಪುರ್, ಸಹಸ್ರಾದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಸಭೆ ನಡೆಸಲಿದ್ದಾರೆ.
ಚುನಾವಣಾ ಕಣದಲ್ಲಿ ಈಗಾಗಲೇ ಎನ್ಡಿಎ ಪರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ಬಿಜೆಪಿ - ಜೆಡಿಯು ನಡುವೆ ಸೀಟು ಹಂಚಿಕೆಯಾಗಿದ್ದು, 121 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 122 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧೆ ಮಾಡಿದೆ. ಅಕ್ಟೋಬರ್ 28, ನವೆಂಬರ್ 3 ಹಾಗೂ 7ರಂದು ಮೂರು ಹಂತಗಳಲ್ಲಿ 243 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನವೆಂಬರ್ 10ಕ್ಕೆ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಎನ್ಡಿಎದಿಂದ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರೆ, ಮಹಾಘಟಬಂಧನ್ದಿಂದ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.