ಹೈದರಾಬಾದ್: ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಎಂಬುದು ಒಂದು ಮಾನಸಿಕ ರೋಗವಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾರಣವೇ ಇಲ್ಲದೆ ಹೆದರಿಕೆ ಉಂಟಾಗುತ್ತಿರುತ್ತದೆ ಮತ್ತು ವಿಚಿತ್ರ ಚಿಂತನೆಗಳು ಮೂಡುತ್ತಿರುತ್ತವೆ. ಇದರಿಂದಾಗಿ ಇವರ ವರ್ತನೆಯೂ ವಿಚಿತ್ರವಾಗಿರುತ್ತದೆ. ಸಾಮಾನ್ಯವಾಗಿ ರೋಗಾಣುಗಳ ಬಗ್ಗೆ ಭಯ ಅಥವಾ ಸಾಮಗ್ರಿಗಳನ್ನು ಮಟ್ಟಸವಾಗಿ ಹೊಂದಿಸಿಡುವ ಅಭ್ಯಾಸಗಳನ್ನು ಒಸಿಡಿ ಹೊಂದಿರುವ ವ್ಯಕ್ತಿಗಳು ಪ್ರದರ್ಶಿಸುತ್ತಾರೆ. ವಿಪರೀತ ಶುಚಿತ್ವವನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಈ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಸಿಡಿ ಹೊಂದಿರುವವರು ತುಂಬಾ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಮೆಕ್ಲೀನ್ಸ್ ಒಸಿಡಿ ಇನ್ಸ್ಟಿಟ್ಯೂಟ್ನ ಕ್ಲಿನಿಕಲ್ ಅಸೆಸ್ಮೆಂಟ್ ಕೋ ಆರ್ಡಿನೇಟರ್ ನಥಾನಿಯಲ್ ವ್ಯಾನ್ ಕಿರ್ಕ್ ಹೇಳುವಂತೆ, ಒಸಿಡಿ ಹೊಂದಿರುವವರು ಯಾವ ರೀತಿಯ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಆಧರಿಸಿ ಕೊರೊನಾವೈರಸ್ ಸನ್ನಿವೇಶದಲ್ಲಿ ಅವರ ಪ್ರತಿಕ್ರಿಯೆಯೂ ಇರುತ್ತದೆ.
ಕೆಲವರಿಗೆ ಸಮಸ್ಯೆ ತೀವ್ರವಾಗಬಹುದು. ಸೋಂಕಿಗೆ ಒಳಗಾಗುವ ಹೆದರಿಕೆ ಅಥವಾ ರೋಗ ಕಾಣಿಸಿಕೊಳ್ಳುವ ಭೀತಿ ಅಥವಾ ಇತರರಿಂದ ರೋಗಾಣುಗಳ ಹರಡಬಹುದು ಎಂದು ಈಗಾಗಲೇ ಹೆದರಿದ್ದವರಲ್ಲಿ ಈ ಸಮಸ್ಯೆ ತೀವ್ರವಾಗಿ ಬಾಧಿಸಬಹುದು ಎಂದು ಅವರು ವಿವರಿಸಿದ್ದಾರೆ. ಇನ್ನು ಇತರ ಕೆಲವರಲ್ಲಿ ಯಾವ ಬದಲಾವಣೆಗಳೂ ಕಂಡುಬರುವುದಿಲ್ಲ. ತಾನು ಹಲವರ ಜೊತೆ ಮಾತನಾಡಿದ್ದು, ಕೋವಿಡ್ 19 ನಿಂದ ತಮಗೆ ಯಾವುದೇ ಹೆದರಿಕೆ ಉಂಟಾಗುತ್ತಿಲ್ಲ ಎಂದು ಒಸಿಡಿಯಿಂದ ಬಳಲುತ್ತಿರುವವರು ಹೇಳಿದ್ದಾಗಿ ವ್ಯಾನ್ ಕಿರ್ಕ್ ಹೇಳಿದ್ದಾರೆ. ಕೇವಲ ಇದೊಂದೇ ಅಲ್ಲ, ಅವರು ಹೊಂದಿರಬಹುದಾದ ಇತರ ಭೀತಿಗಳಿಗೂ ಕೋವಿಡ್ 19 ಸಾಂಕ್ರಾಮಿಕ ರೋಗದ ಈ ಸನ್ನಿವೇಶವು ಅವರನ್ನು ಇನ್ನಷ್ಟು ಚಿಂತಾಕ್ರಾಂತರನ್ನಾಗಿಸುವ ಸಾಧ್ಯತೆಯಿದೆ.
ಈಗ ಕಂಡುಬರುತ್ತಿರುವ ಆತಂಕಗಳ ರೀತಿಯಲ್ಲೇ ಒಸಿಡಿ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳಲಿ ರೋಗ ಲಕ್ಷಣಗಳು ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಕೊರೊನಾ ವೈರಸ್ ತಡೆಯುವುದಕ್ಕಾಗಿ ಕೆಲವು ಶುಚಿತ್ವ ಅಭ್ಯಾಸಗಳನ್ನು ನಾವು ಹೊಂದಿರಬೇಕು ಎಂಬ ಮುನ್ನೆಚ್ಚರಿಕೆಯನ್ನೇ ಈ ಒಸಿಡಿ ಗುಣಲಕ್ಷಣ ಹೊಂದಿರುವವರು ವಿಪರೀತವಾಗಿ ಆಚರಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಹಲವು ಸಂಸ್ಥೆಗಳು ಕೈ ತೊಳೆಯುವುದು ಹೇಗೆ ಎಂಬ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿವೆ. ಆದರೆ ವ್ಯಾನ್ ಕಿರ್ಕ್ ಹೇಳುವಂತೆ “ಒಸಿಡಿ ಗುಣಲಕ್ಷಣ ಹೊಂದಿರುವವರಿಗೆ ಪದೇ ಪದೇ ಕೈ ತೊಳೆಯಬೇಕೆಂಬ ಭಾವ ಉಂಟಾಗಬಹುದು. ಅಷ್ಟೇ ಅಲ್ಲ, ಅವರು ಈ ಸೂಚನೆಗಳನ್ನೇ ವಿಪರೀತವಾಗಿ ಆಚರಿಸಬಹುದು. ಅದರಲ್ಲೂ ಉದ್ವೇಗ ಮತ್ತು ಮಾನಸಿಕ ಅಸ್ಥಿರತೆ ಇದ್ದರಂತೂ ಇದು ವಿಪರೀತಕ್ಕೆ ಹೋಗಬಹುದು ಎಂದು ಅವರು ಹೇಳಿದ್ದಾರೆ.
ಒಸಿಡಿ ಗುಣಲಕ್ಷಣ ಹೊಂದಿರುವವರು ಶುಚಿತ್ವದ ಒಂದು ಭಾಗದ ಸೂಚನೆಗಳನ್ನು ಮಾತ್ರ ಪಾಲಿಸುತ್ತಾರೆ. ಇತರ ಸೂಚನೆಗಳನ್ನು ನಿರ್ಲಕ್ಷಿಸುತ್ತಾರೆ. ಉದ್ವೇಗಕ್ಕೆ ನಾವು ಒಳಗಾದಾಗ ಸಾಮಾನ್ಯವಾಗಿ ಕೆಲವೇ ಸಂಗತಿಗಳ ಮೇಲೆ ವಿಪರೀತ ಗಮನ ಹರಿಸುತ್ತೇವೆ ಮತ್ತು ಇತರ ಹಲವು ಸಂಗತಿಗಳನ್ನು ಬಿಟ್ಟುಬಿಡುತ್ತೇವೆ. ಈ ರೀತಿಯಲ್ಲೇ ಸಂಪ್ರದಾಯಗಳು ಬೆಳೆದು ಬಂದಿವೆ. ಇದು ಒಸಿಡಿ ಗುಣಲಕ್ಷಣ ಹೊಂದಿರುವವರಿಗೆ ಉದ್ವೇಗ ಮತ್ತು ಅಸ್ಥಿರತೆಯನ್ನು ಹೋಗಲಾಡಿಸುವ ಒಂದು ಮಾರ್ಗ ಇದು. ಕೊರೊನಾವೈರಸ್ ಕುರಿತು ಪದೇ ಪದೇ ಸುದ್ದಿಗಳು ಬಿತ್ತರವಾಗುವುದು ಕೂಡ ಒಸಿಡಿ ಹೊಂದಿರುವವರಿಗೆ ಆತಂಕ ಮೂಡಿಸಬಹುದು. ಒಸಿಡಿ ಹೊಂದಿರುವವರು ಮಾಹಿತಿಯ ಒಂದು ಅಂಶವನ್ನು ತೆಗೆದುಕೊಂಡು ಅದನ್ನು ಅತಿಯಾಗಿ ಆಚರಿಸುತ್ತಾರೆ. ಒಂದು ಸ್ಟೋರಿ ಅಥವಾ ಒಂದು ಹೆಡ್ಲೈನನ್ನೇ ಅವರು ಗಂಭೀರವಾಗಿ ಪರಿಗಣಿಸಿಬಿಡಬಹುದು ಎಂದು ವ್ಯಾನ್ ಕಿರ್ಕ್ ವಿವರಿಸಿದ್ದಾರೆ.
ಉದ್ವೇಗ ಹೆಚ್ಚುತ್ತಿದ್ದಾಗ ವಾಸ್ತವಾಂಶ ಮತ್ತು ಸಂಬಂಧಿತ ರಿಸ್ಕ್ಗಳನ್ನು ಪ್ರತ್ಯೇಕಿಸಿ ನೋಡುವುದು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲು, ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಪಡೆಯಬೇಕು ಮತ್ತು ನಿಗದಿಪಡಿಸಿದ ನಿಯಮ ಮತ್ತು ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ ಎಂದು ವ್ಯಾನ್ ಕಿರ್ಕ್ ಸಲಹೆ ಮಾಡಿದ್ದಾರೆ. ಇಂದಿನ ಜಗತ್ತಿನಲ್ಲಿ, ನಾವು ಯಾವ ರೀತಿಯ ಮಾಹಿತಿಯನ್ನು ಪಡೆಯಬಹುದು ಎಂಬುದನ್ನು ನಿಯಂತ್ರಿಸಬಹುದು ಮತ್ತು ಸಿಡಿಸಿ ಹಾಗೂ ಡಬ್ಲ್ಯೂಎಚ್ಒ ರೀತಿಯ ವಿಶ್ವಾಸಾರ್ಹ ಮೂಲಗಳಿಂದ ಮಾತ್ರವೇ ಮಾಹಿತಿಯನ್ನು ಪಡೆಯಬೇಕು. ಆದರೆ ನಮ್ಮ ಅಭ್ಯಾಸಗಳಿಂದಾಗಿ ನಾವು ಶೇ. 100 ರಷ್ಟು ಸುರಕ್ಷಿತ ಎಂಬ ಭಾವವನ್ನು ನಾವು ಹೊಂದುವಂತಿಲ್ಲ. ನಮ್ಮಿಂದ ಸಾಧ್ಯವಾದ ಪ್ರಯತ್ನಗಳನ್ನಷ್ಟೇ ನಾವು ಮಾಡಬಹುದು. ನಮ್ಮ ಪ್ರಯತ್ನಗಳು ಫಲ ಕೊಡದೆಯೂ ಇರಬಹುದು.
ಹಲವು ವಿಧಾನಗಳಲ್ಲಿ ಒಸಿಡಿ ಹೊಂದಿರುವವರ ಬಗ್ಗೆ ಜನಸಾಮಾನ್ಯರು ಇನ್ನಷ್ಟು ತಿಳಿವಳಿಕೆ ಪಡೆಯಲು ಈ ಸನ್ನಿವೇಶ ನೆರವಾಗುತ್ತದೆ. ಈಗ ಉದ್ವೇಗ ಹೆಚ್ಚಾಗುತ್ತದೆ. ಪ್ರತಿನಿತ್ಯವೂ ಉದ್ವೇಗ ಮತ್ತು ಆತಂಕದಲ್ಲಿ ಬದುಕುವುದು ಹೇಗೆ ಮತ್ತು ಅದು ಯಾವ ಪರಿಣಾಮವನ್ನು ಬೀರುತ್ತದೆ ಎಂಬ ತಿಳಿವಳಿಕೆಯನ್ನು ನೀಡುತ್ತದೆ. ನನಗೆ ರೋಗ ಲಕ್ಷಣ ಇಲ್ಲ ಎಂದ ಮಾತ್ರಕ್ಕೆ ರೋಗ ಇಲ್ಲ ಎಂದು ಅರ್ಥವೇ? ಅಥವಾ ನನಗೆ ಗೊತ್ತಿಲ್ಲದೇ ನಾನು ಇನ್ಯಾರಿಗಾದರೂ ರೋಗವನ್ನು ಹರಡಿಸಿಬಿಟ್ಟರೆ? ಎಂಬಂತಹ ಆತಂಕವನ್ನು ಒಸಿಡಿ ಹೊಂದಿರುವವರು ನಿತ್ಯವೂ ಎದುರಿಸುತ್ತಿರುತ್ತಾರೆ. ಒಸಿಡಿ ಹೊಂದಿರುವವರು ಮತ್ತು ಒಸಿಡಿ ಹೊಂದಿಲ್ಲದ ಇಬ್ಬರ ದೃಷ್ಟಿಕೋನಗಳು ಸರಿಯಾಗಿರಬೇಕು. ಮಾರ್ಗಸೂಚಿಗಳನ್ನು ನಾವು ಅನುಸರಿಸಬೇಕು. ಆದರೆ ನಾವು ಸುದ್ದಿಯ ಶೀರ್ಷಿಕೆಗಳನ್ನಷ್ಟೇ ಓದಿಕೊಂಡು, ಅದರಿಂದ ಉದ್ವೇಗವನ್ನು ಸೃಷ್ಟಿಸಿಕೊಳ್ಳಬಾರದು ಎಂದು ವ್ಯಾನ್ ಕಿರ್ಕ್ ಹೇಳುತ್ತಾರೆ.