ಕೌಲಾಲಂಪುರ್: ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಸಂಸ್ಕರಿಸಿದ ತಾಳೆ ಎಣ್ಣೆಯನ್ನು ನಿರ್ಬಂಧಿಸಿರುವುದಕ್ಕೆ, ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಲೇಷ್ಯಾ ಪ್ರಧಾನಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರ ಕುರಿತು ಟೀಕಿಸಿದ್ರು. ಆದ್ರೆ ಈ ರೀತಿ ನಿಷೇಧ ಮಾಡುವುದರಿಂದ ನಾವು ಟೀಕಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತದ ಈ ಕ್ರಮದಿಂದ ನಮಗೆ ಆರ್ಥಿಕ ಹಿನ್ನಡೆ ಉಂಟಾದರೂ, ಅವುಗಳ ವಿರುದ್ಧ ಮಾತನಾಡುವುದನ್ನು ನಾನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಭಾರತದ ನೂತನ ಪೌರತ್ವ ತಿದ್ದುಪಡಿ ಕಾನೂನನ್ನು (ಸಿಎಎ) ಮಹಾತಿರ್ ಮುಹಮ್ಮದ್ ಕಟುವಾಗಿ ಟೀಕಿಸಿದ್ದರು. ಹಾಗಾಗಿ ಆ ದೇಶದಿಂದ ತರಿಸಿಕೊಳ್ಳಲಾಗುತ್ತಿದ್ದ ತಾಳೆ ಎಣ್ಣೆ ಆಮದಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ.
ಭಾರತೀಯ ಪಾಮ್ ಆಯಿಲ್ ಖರೀದಿದಾರರು ಮಲೇಷ್ಯಾದ ಕಚ್ಚಾ ತಾಳೆ ಎಣ್ಣೆಯ ರಫ್ತು ಹೆಚ್ಚಿಸಲು ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯ ರಫ್ತು ಕಡಿಮೆ ಮಾಡಲು ಭಾರತ ಈ ರೀತಿ ಮಾಡಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.
ಭಾರತದ ನಿರ್ಬಂಧ ಹಿನ್ನೆಲೆಯಲ್ಲಿ, ಮಲೇಷ್ಯಾದ ತಾಳೆ ಎಣ್ಣೆ ಸಂಸ್ಕರಣೆ ಘಟಕಗಳು ವ್ಯಾಪಾರ ಕಳೆದುಕೊಂಡಿವೆ. ಇದಕ್ಕೆ ಸರ್ಕಾರ ಪರಿಹಾರವೊಂದನ್ನು ಕಂಡುಕೊಳ್ಳಲಿದೆ ಎಂದು ಮಹತಿರ್ ಹೇಳಿದ್ದಾರೆ.