ರಾಜಸ್ಥಾನ: ಭಾರತ - ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಖಜುವಾಲಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಹಾರಿಬಂದ ಬಲೂನ್ ಪತ್ತೆಯಾಗಿದೆ.
ಖಜುವಾಲಾದ ರೈತರ ಜಮೀನಿನಲ್ಲಿ ಪತ್ತೆಯಾಗಿರುವ ಈ ಬಲೂನ್ ಮೇಲೆ ಪಾಕ್ ಧ್ವಜದ ಮುದ್ರಣವಿದ್ದು, 'ಆಜಾದಿ ಮುಬಾರಕ್' (ಸ್ವಾತಂತ್ರ್ಯ ದಿನದ ಶುಭಾಶಯ) ಎಂದು ಬರೆಯಲಾಗಿದೆ. ಇಂದು ಬೆಳಗ್ಗೆ ಇದನ್ನು ಮೊದಲು ರೈತರು ನೋಡಿದ್ದು, ಖಜುವಾಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲೂನ್ ಅನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಲೂನ್ ಅನ್ನು ಖಜುವಾಲಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಈ ಕುರಿತು ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ತಿಂಗಳ ಮುನ್ನ ಗಡಿ ಪ್ರದೇಶವಾದ ಶ್ರೀಗಂಗಾ ನಗರದ ದೌಲತ್‌ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಐಎ (ಪಾಕಿಸ್ತಾನ್ ಇಂಟರನ್ಯಾಷನಲ್ ಏರ್ಲೈನ್ಸ್) (PIA- Pakistan International Airlines) ಎಂದು ಬರೆದ ವಿಮಾನ ವಿನ್ಯಾಸದ ಬಲೂನ್ ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.