ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಇಂದು ಬೆಳ್ಳಂಬೆಳಗ್ಗೆ ಇಲ್ಲಿನ ಪೂಂಚ್ ಮತ್ತು ಕಥುವಾ ಜಿಲ್ಲೆಗಳಲ್ಲಿ ಗಡಿನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನ ಪಡೆಗಳು ಗುಂಡಿನ ದಾಳಿ ನಡೆಸಿವೆ.
ಪಾಕ್ನ ಗುಂಡಿನ ದಾಳಿಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಇದೇ ಸಂದರ್ಭದಲ್ಲಿ ಶೋಪಿಯಾನ್ ಬಳಿ ಉಗ್ರರ ಗಡಿ ನುಸುಳುವಿಕೆ ಹೆಚ್ಚಾಗಿದ್ದು, ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ. ಅತ್ತ ಕದನ ವಿರಾಮ ಉಲ್ಲಂಘನೆ ವೇಳೆ ನಡೆಯುವ ಗುಂಡಿನ ದಾಳಿಯ ವೇಳೆ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡ ಉಗ್ರರು ಭಾರತೀಯ ಯೋಧರ ಕೈಗೆ ಸಿಕ್ಕಿ ಬಲಿಯಾಗಿದ್ದಾರೆ.
ಇಂದು ಬೆಳಗ್ಗೆ 6:15 ರ ಸುಮಾರಿಗೆ ಪಾಕಿಸ್ತಾನವು ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‌ನಲ್ಲಿ ಎಲ್‌ಒಸಿ ಉದ್ದಕ್ಕೂ ಲಘು ಶಸ್ತ್ರಾಸ್ತ್ರ ಮತ್ತು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ. ಮತ್ತೆ ಮತ್ತೆ ಪಾಕ್ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಇದಕ್ಕೆ ಭಾರತ ಸೇನೆ ಪ್ರತೀಕಾರ ತೀರಿಸುತ್ತದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ತಡರಾತ್ರಿ 1 ಗಂಟೆ ಸುಮಾರಿಗೆ ಪಾಕಿಸ್ತಾನ ಗುಂಡಿನ ದಾಳಿ ಆರಂಭಿಸಿದ್ದು, ಮುಂಜಾನೆ ನಾಲ್ಕೂವರೆ ಗಂಟೆವರೆಗೂ ದಾಳಿ ಮುಂದುವರಿಸಿದೆ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳಿಂದ ನಡೆಯುತ್ತಿರುವ ಗಡಿಯಾಚೆಗಿನ ಗುಂಡಿನ ದಾಳಿಯು ಗಡಿ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವರ್ಷ ಜಮ್ಮು ಮತ್ತು ಕಾಶ್ಮೀರದ ಗಡಿಯುದ್ದಕ್ಕೂ ಪಾಕಿಸ್ತಾನ ಆಗಾಗ ಶೆಲ್ ದಾಳಿ ನಡೆಸುತ್ತಿದ್ದು, ಜೂನ್ 10 ರವರೆಗೆ 2,027 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿ ತನ್ನ ದುರ್ಬುದ್ಧಿ ಪ್ರದರ್ಶಿಸಿದೆ. ಇದೇ ತಿಂಗಳು ರಾಜೌರಿ ಮತ್ತು ಪೂಂಚ್ ವಲಯಗಳಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಿಂದಾಗಿ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು.