ಜಮ್ಮು: ಕಣಿವೆನಾಡಿನಲ್ಲಿ ಪಾಕ್ ತನ್ನ ಪುಂಡಾಟವನ್ನು ಮುಂದುವರೆಸಿದೆ. ಗುರುವಾರ ಗಡಿ ನಿಯಂತ್ರಣ ರೇಖೆಯ ಹಲವು ಕಡೆಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ತನ್ನ ಪುಂಡಾಟ ಪ್ರದರ್ಶಿಸಿದೆ.
ಈ ಬಗ್ಗೆ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಮಾತನಾಡಿ ಪಾಕಿಸ್ತಾನ ಎಲ್ಒಸಿಯ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಸಣ್ಣ ಶಸ್ತ್ರಗಳು ಹಾಗೂ ಶೆಲ್ಗಳನ್ನು ದಾಳಿಗೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಳಗ್ಗೆ 5.30ಕ್ಕೆ ಮನಕೋಟ್ ಸೆಕ್ಟರ್ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ. ಮಧ್ಯಾಹ್ನ 12.15ರ ವೇಳೆಗೆ ದೇಗ್ವಾರ್ನಲ್ಲಿ ಕದನ ವಿರಾಮ ಉಲ್ಲಂಘಿಸಿ ಉದ್ಧಟತನ ಮೆರೆದಿದೆ.
ಪೂಂಚ್ ಜಿಲ್ಲೆಯ ಮೆಂದಾರ್ನಲ್ಲೂ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಎಲ್ಲಾ ಕಡೆಗಳಲ್ಲಿ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
1999ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಪಾಕ್ ನಿಯಮವನ್ನು ಉಲ್ಲಂಘಿಸುತ್ತಿದೆ.
ಈವರೆಗೆ 2,730 ಬಾರಿ ಪಾಕಿಸ್ತಾನ ಎಲ್ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ. 24 ನಾಗರಿಕರು ಮೃತಪಟ್ಟರೆ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಸತತವಾಗಿ ಪಾಕ್ನಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಿರುವ ಕಾರಣದಿಂದ ಎಲ್ಒಸಿ ಬಳಿಯಿರುವ ಹಳ್ಳಿಗಳ ಗ್ರಾಮಸ್ಥರು ಸದಾ ಆತಂಕದಲ್ಲೇ ಬದುಕುತ್ತಿದ್ದಾರೆ.