ನವದೆಹಲಿ: ಕೊರೊನಾ ವೈರಸ್ ತಂದೊಡ್ಡಿರುವ ಸಂಕಷ್ಟದಿಂದಾಗಿ ದೇಶದಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳು ಮತ್ತು ಎನ್ 95 ಮುಖಗವಸುಗಳನ್ನು (ಮಾಸ್ಕ್) ತಯಾರಿಸಲಾಗುತ್ತಿದ್ದು, ಸ್ವದೇಶಿ ವೆಂಟಿಲೇಟರ್‌ಗಳ ಉತ್ಪಾದನೆಯೂ ಪ್ರಾರಂಭವಾಗಿದೆ ಮತ್ತು ಒಂಬತ್ತು ಕೈಗಾರಿಕಾ ಘಟಕಗಳ ಮೂಲಕ 59,000 ಕ್ಕೂ ಹೆಚ್ಚು ವೆಂಟಿಲೇಟರ್ಗಳನ್ನು ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್-19 ರ ಕುರಿತು ನಡೆದ ಮಂತ್ರಿಗಳ ಉನ್ನತ ಮಟ್ಟದ ಸಭೆಯಲ್ಲಿ ಆರೋಗ್ಯ ಸಚಿವಾಲಯವು ಈ ಮಾಹಿತಿ ನೀಡಿದ್ದು, ಈ ಹಿಂದೆ ಗುರುತಿಸಲ್ಪಟ್ಟ ದೇಶೀಯ ಉತ್ಪಾದನೆಗಳು, ರಕ್ಷಣಾ ಸಾಧನಗಳು (ಪಿಪಿಇ) ಕಿಟ್‌ಗಳು, ಫೇಸ್ ಮಾಸ್ಕ್ ಇತ್ಯಾದಿಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಈಗ ಲಭ್ಯವಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ದಿನದಲ್ಲಿ ದೇಶದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳು ಮತ್ತು ಎನ್ 95 ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ 104 ದೇಶೀಯ ಕಾರ್ಖಾನೆಗಳು ಪಿಪಿಇ ಕಿಟ್‌ಗಳನ್ನು ತಯಾರಿಸುತ್ತಿದ್ದರೆ, ಮೂರು ಕಾರ್ಖಾನೆಗಳು ಎನ್- 95 ಮಾಸ್ಕ್ ತಯಾರಿಸುವಲ್ಲಿ ನಿರತವಾಗಿದೆ. ಇದಲ್ಲದೇ, ವೆಂಟಿಲೇಟರ್‌ಗಳ ಉತ್ಪಾದನೆಯನ್ನು ದೇಶೀಯ ಕಂಪನಿಗಳು ತಯಾರಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿಗಳ ಪ್ರಕಾರ ಕೊರೊನಾ ವೈರಸ್ನಿಂದ ಸಾವಿನ ಪ್ರಮಾಣವು ಶೇಕಡಾ 3.1 ರಷ್ಟಿದ್ದರೆ, ಚೇತರಿಕೆ ಪ್ರಮಾಣವು ಶೇಕಡಾ 20 ಕ್ಕಿಂತ ಹೆಚ್ಚಿದೆ, ಇದು ಇತರ ದೇಶಗಳಿಗಿಂತ ತುಲನಾತ್ಮಕವಾಗಿ ಉತ್ತಮವಾಗಿದೆ. ಇದು ದೇಶದಲ್ಲಿನ ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮ ಎಂದು ಪರಿಗಣಿಸಬಹುದು ಎಂದಿದ್ದಾರೆ.
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ಕುರಿತು ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ರೋಗಿಗಳ ಕಳಂಕ ಮತ್ತು ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸುವ ತುರ್ತು ಅಗತ್ಯದ ದೃಷ್ಟಿಯಿಂದ ಹಾಗೂ ಆರೋಗ್ಯ ಕಾರ್ಯಕರ್ತರು ಎದುರುಸುತ್ತಿರುವ ಸಮಸ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದು, ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ರ ತಿದ್ದುಪಡಿಯ ಸುಗ್ರೀವಾಜ್ಞೆಯನ್ನು ಅತ್ಯಂತ ಕಠಿಣ ನಿಬಂಧನೆಗಳೊಂದಿಗೆ ಪ್ರಕಟಿಸಲಾಗಿದೆ ಎಂದಿದ್ದಾರೆ.
ಇದೇ ವೇಳೆ, ವೈದ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಹರ್ಷವರ್ಧನ್, ಇದು ಅವರ ಹೋರಾಟ ಮಾತ್ರವಲ್ಲ, ನಮ್ಮ ಸಾಮೂಹಿಕ ಪ್ರಯತ್ನ. ಅವರು ನಮ್ಮ ಯೋಧರು ಮತ್ತು ರಾಷ್ಟ್ರಕ್ಕೆ ಅವರು ನೀಡುತ್ತಿರುವ ಕೊಡುಗೆಗಳನ್ನು ನಾವು ಗೌರವಿಸಬೇಕಿದೆ. ಅಷ್ಟು ಮಾತ್ರವಲ್ಲದೇ ಅವರ ಸುರಕ್ಷತೆ ಮತ್ತು ಘನತೆಯನ್ನು ಕಾಪಾಡುವಂತೆ ನೋಡಿಕೊಳ್ಳೋಣ" ಎಂದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.