ಗುರುಗ್ರಾಮ್ (ಹರಿಯಾಣ): ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಮೂಡಿದೆ. ಸಿಎಂ ಕಮಲನಾಥ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಒತ್ತಾಯಪೂರ್ವಕವಾಗಿ ಗುರುಗ್ರಾಮ್ ಹೋಟೆಲ್ನಲ್ಲಿ ನಮ್ಮ 8 ಜನ ಶಾಸಕರನ್ನು ಬಿಜೆಪಿ ಕೂಡಿಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನು ಬಿಜೆಪಿ ನಾಯಕರ ಪ್ರಯತ್ನದ ಮಧ್ಯೆಯೂ ಹೋಟೆಲ್ನಲ್ಲಿದ್ದ ಅಮಾನತ್ತಾದ ಬಿಎಸ್ಪಿ ಶಾಸಕಿ ರಮಾಬಾಯಿ ಮರಳಿ ಬಂದಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಹೋಟೆಲ್ನಲ್ಲಿ ಶಾಸಕರನ್ನು ಕೂಡಿ ಹಾಕಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಸಚಿವ ಜೀತು ಪಟ್ವಾರಿ ಹಾಗೂ ಜೈವರ್ಧನ್ ಸಿಂಗ್ ಸ್ಥಳಕ್ಕೆ ತೆರಳಿ ನಮ್ಮ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
ಬಿಜೆಪಿಯ ಕೆಲ ನಾಯಕರು ನಮ್ಮ 10-11 ಶಾಸಕರಿಗೆ ಹಣ ಕೊಡಲು ಹೋಗಿದ್ದರು. ಆದ್ರೆ ಯಾರೂ ಕೂಡ ಅವರ ಜೊತೆ ಹೋಗಿಲ್ಲ. 4 ಶಾಸಕರನ್ನು ಬಿಟ್ಟು ಎಲ್ಲರೂ ನಮ್ಮ ಜೊತೆ ಇದ್ದಾರೆ. ಆ 4 ಶಾಸಕರು ಕೂಡ ಬರಲಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದರು.
ಎಲ್ಲವೂ ನಮ್ಮ ಕಂಟ್ರೋಲ್ನಲ್ಲಿದೆ. ಇಂದು ಸುದ್ದಿಗೋಷ್ಠಿ ಕರೆದು ಎಲ್ಲವನ್ನೂ ಹೇಳುತ್ತೇವೆ ಎಂದು ಸಚಿವ ಪಟ್ವಾರಿ ಮಾಹಿತಿ ನೀಡಿದ್ದಾರೆ.