ಜಮ್ತಾರಾ (ಜಾರ್ಖಂಡ್): ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರಿಗೆ 23 ಲಕ್ಷ ರೂ. ವಂಚನೆ ಮಾಡಿದ ಆರೋಪದ ಮೇಲೆ ಜಾರ್ಖಂಡ್‌ನ ಜಮ್ತಾರಾ ಪಟ್ಟಣದಲ್ಲಿ ಕುತುಬುಲ್ ಅನ್ಸಾರಿ ಎಂಬ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಮ್ತಾರಾ ಎಸ್ಪಿ ದೀಪಕ್ ಕುಮಾರ್ ಸಿನ್ಹಾ, 2019ರ ಆಗಸ್ಟ್ನಲ್ಲಿ ಇಬ್ಬರು ಸೈಬರ್ ಅಪರಾಧಿಗಳು ಪ್ರಣೀತ್ ಕೌರ್ ಅವರನ್ನು ವಂಚಿಸಿದ್ದಾರೆ. ಅಟೌಲ್ ಅನ್ಸಾರಿ ಎಂದು ಗುರುತಿಸಲ್ಪಟ್ಟ ಓರ್ವನನ್ನು ಬಂಧಿಸಲಾಗಿತ್ತು. ಇದೀಗ ಕುತುಬುಲ್ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಕುತುಬುಲ್ ಧರಂಪುರ ಗ್ರಾಮದ ನಿವಾಸಿ. ಅವನ ಮೊಬೈಲ್ ಲೊಕೇಷನ್ ಪತ್ತೆ ಮಾಡಿದ ನಂತರ ಆತನನ್ನು ಬಂಧಿಸಿದ್ದೇವೆ. ಬಂಧಿತನಿಂದ ಮೊಬೈಲ್ ಫೋನ್, ಎರಡು ಸಿಮ್ ಕಾರ್ಡ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಂಜಾಬ್ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಪಟಿಯಾಲ ಸಂಸದೆ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಆನ್‌ಲೈನ್ ಬ್ಯಾಂಕಿಂಗ್ ವಂಚನೆಗೆ ಬಲಿಯಾಗಿದ್ದರು. ಒಂದು ವರ್ಷದ ಹಿಂದೆ ತನ್ನ ಎಸ್‌ಬಿಐ ಖಾತೆಯಿಂದ 23 ಲಕ್ಷ ರೂ. ಕಳೆದುಕೊಂಡಿದ್ದರು.
ಮಾಸ್ಟರ್ ಮೈಂಡ್ ಕುತುಬುಲ್ ಅನ್ಸಾರಿ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾಗ ಪ್ರಣೀತ್ ಕೌರ್ ಅವರಿಗೆ ಕರೆ ಮಾಡಿದ್ದನು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು ಸಂಬಳವನ್ನು ಖಾತೆಗೆ ಜಮಾ ಮಾಡಬೇಕಾಗಿದೆ ಪ್ರಮುಖ ಮಾಹಿತಿಯ ಅಗತ್ಯವಿದೆ ಎಂದು ಎಟಿಎಂ ಪಿನ್ ಮತ್ತು ಒಟಿಪಿ ಸಂಖ್ಯೆ ಪಡೆದುಕೊಂಡಿದ್ದ. ಮೂರು ವಹಿವಾಟುಗಳಲ್ಲಿ ಪ್ರಣೀತ್ ಕೌರ್ ಅವರ ಖಾತೆಯಿಂದ 23 ಲಕ್ಷ ರೂ. ತೆಗೆದುಕೊಳ್ಳಲಾಗಿತ್ತು.
ವಿಶೇಷವೆಂದರೆ ಜಾರ್ಖಂಡ್‌ನ ಜಮ್ತಾರಾ ಸೈಬರ್ ಅಪರಾಧದ ಕೇಂದ್ರವಾಗಿದೆ. ಸಂತಾಲ್ ಪರಗಣ ಪ್ರದೇಶದಲ್ಲಿರುವ ಈ ಜಿಲ್ಲೆಯು ದೀರ್ಘ ಕಾಲದವರೆಗೆ ಅಪರಾಧ ಪೀಡಿತ ವಲಯವಾಗಿದೆ.