ಭುವನೇಶ್ವರ: ಇತ್ತೀಚೆಗೆ ಇಟಲಿಯಿಂದ ಹಿಂದಿರುಗಿದ್ದ ಸಂಶೋಧಕರೊಬ್ಬರಿಗೆ ಕೊರೊನಾ ವೈರಸ್ ತಗುಲಿದೆ ಎಂದು ದೃಢಪಟ್ಟಿದ್ದು, ಒಡಿಶಾದ ಮೊದಲ ಪ್ರಕರಣ ಇದಾಗಿದೆ.
33 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇದ್ದು, ಇಲ್ಲಿನ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು, ಬೇರೆ ಯಾವುದೇ ತೊಂದರೆಗಳು ಅವರಲ್ಲಿ ಕಂಡುಬಂದಿಲ್ಲ ಎಂದು ರಾಜ್ಯ ಸರ್ಕಾರದ ಕೊರೊನಾ ವೈರಸ್ ಪ್ರಕರಣಗಳ ಮುಖ್ಯ ವಕ್ತಾರ ಸುಬ್ರೋಟೋ ಬಾಗ್ಚಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಮಾರ್ಚ್ 6 ರಂದು ಶಂಕಿತ ವ್ಯಕ್ತಿ ಇಟಲಿಯಿಂದ ದೆಹಲಿಯನ್ನು ತಲುಪಿದ್ದರು. ಮಾರ್ಚ್ 12 ರಂದು ರೈಲಿನ ಮೂಲಕ ಭುವನೇಶ್ವರಕ್ಕೆ ಬಂದಿಳಿದಿದ್ದರು. ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆ ಮಾರ್ಚ್ 13 ರಂದು ವೈದ್ಯರನ್ನು ಸಂಪರ್ಕಿಸಿದ್ದರು.
ಇದಾದ ನಂತರ ಅಂದರೆ, ಮಾರ್ಚ್ 14 ರಂದು ಕ್ಯಾಪಿಟಲ್ ಆಸ್ಪತ್ರೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಇವರ ಸಂಪರ್ಕದಲ್ಲಿದ್ದ ಎಲ್ಲಾ ಜನರನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.