ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಸೋಂಕಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಕೊರತೆಯನ್ನು ನೀಗಿಸಲು ನಗರದಲ್ಲಿರುವ 10ರಿಂದ 40 ಹಾಸಿಗೆಗಳ ಸಾಮರ್ಥ್ಯದ ಎಲ್ಲಾ ನರ್ಸಿಂಗ್ ಹೋಮ್ಗಳನ್ನು ಕೋವಿಡ್ ಚಿಕಿತ್ಸಾ ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಬೇಕೆಂದು ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಆದೇಶ ನೀಡಿದೆ.
ಇವುಗಳಲ್ಲಿ ಕಣ್ಣಿನ ಚಿಕಿತ್ಸಾ ಕೇಂದ್ರಗಳು, ಇಎನ್ಟಿ ಆಸ್ಪತ್ರೆಗಳು, ಡಯಾಲಿಸೀಸ್ ಕೇಂದ್ರಗಳು, ಹೆರಿಗೆ ಆಸ್ಪತ್ರೆಗಳು, ಐವಿಎಫ್ ಕೇಂದ್ರಗಳಿಗೆ ವಿನಾಯಿತಿ ನೀಡಲಾಗಿದೆ. ಆದೇಶ ನೀಡಿದ ಮೂರು ದಿನಗಳಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳಾಗಿನ ಪರಿವರ್ತನೆ ಮಾಡಿಕೊಳ್ಳದಿದ್ದರೇ ಕಾನೂನು ನಿಯಮ ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ನರ್ಸಿಂಗ್ ಹೋಮ್ಗಳಿಗೆ ಎಚ್ಚರಿಕೆ ನೀಡಿದೆ.
50 ಹಾಸಿಗೆಗಳು ಹಾಗೂ ಅದಕ್ಕಿಂತ ಹೆಚ್ಚು ಹಾಸಿಗೆಗಳ ಸಾಮರ್ಥ್ಯವಿರುವ 117 ನರ್ಸಿಂಗ್ ಹೋಮ್ಗಳನ್ನು ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 20ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕೆಂದು ದೆಹಲಿ ಸರ್ಕಾರ ನಿರ್ದೇಶನ ನೀಡಿದೆ. ಇದನ್ನು ಉಲ್ಲಂಘಿಸಿದರೆ 2011ರ ನರ್ಸಿಂಗ್ ಹೋಮ್ಸ್ ನೋಂದಣಿ (ತಿದ್ದುಪಡಿ) ನಿಯಮಗಳು ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ದೆಹಲಿಯ ಕೊರೊನಾ ಅಪ್ಲಿಕೇಶನ್ನಲ್ಲಿರುವಂತೆ ಈಗಾಗಲೇ ಖಾಸಗಿ ವಲಯದಲ್ಲಿ ಶೇಕಡಾ 70ರಷ್ಟು ಕೋವಿಡ್ ಚಿಕಿತ್ಸಾ ಘಟಕಗಳನ್ನು ರೂಪಿಸಲಾಗಿದೆ. ಜೂನ್ 30ರೊಳಗೆ ಇನ್ನೂ 15 ಸಾವಿರ ಕೊವಿಡ್ ಚಿಕಿತ್ಸಾ ಹಾಸಿಗೆಗಳ ಅವಶ್ಯಕತೆಯಿರುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.