ಗ್ರೇಟರ್ ನೋಯ್ಡಾ (ಉತ್ತರಪ್ರದೇಶ): ಗ್ರೇಟರ್ ನೋಯ್ಡಾದಲ್ಲಿ 13 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ...
ಅಕ್ಟೋಬರ್ 6ರಂದು ಬಾಲಕಿ ಮನೆಯಲ್ಲಿದ್ದಳು. ನೆರೆಹೊರೆಯವರಾದ ಮೂವರು ಬಾಲಕಿ ಮೇಲೆ ಅತ್ಯಾಚಾರ ಎಸಗಲು ಸಂಚು ರೂಪಿಸಿದ್ದರು. ಆಟವಾಡುತ್ತಿದ್ದ 12 ವರ್ಷದ ಬಾಲಕನೊಬ್ಬನಿಗೆ ಬಾಲಕಿಯನ್ನು ಆಟವಾಡಲು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಅದೇ ರೀತಿ ಬಾಲಕ ಬಾಲಕಿಯನ್ನು ಆಟವಾಡಲು ಕರೆದುಕೊಂಡು ಬಂದಿದ್ದಾನೆ ಎಂದು ಗೌತಮ ಬುದ್ಧ ನಗರ ಡಿಸಿಪಿ (ಮಹಿಳಾ ಸುರಕ್ಷತೆ) ವೃಂದಾ ಶುಕ್ಲಾ ಹೇಳಿದ್ದಾರೆ.
ಇನ್ನು ಬಾಲಕಿ ಆ ಮೂವರಿಗೂ ಪರಿಚಯಸ್ಥಳಾಗಿದ್ದಾಳೆ. ಇದರ ಲಾಭ ಪಡೆದ ಆ ಮೂವರು ಬಾಲಕಿ ಮೇಲೆ ಅತ್ಯಾಚಾರವೆಸಗಿ ಏನೂ ತಿಳಿಯದಂತೆ ಸುಮ್ಮನಿದ್ದರು. ಬಳಿಕ ಬಾಲಕಿ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿ ತಿಳಿದ ತಾಯಿ ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.