ಶ್ರೀನಗರ: ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾಂತ್ಯ (ಐಎಸ್ಕೆಪಿ) ದೊಂದಿಗೆ ಒಡನಾಟ ಹೊಂದಿದ್ದಕ್ಕಾಗಿ ಕಾಶ್ಮೀರದ ಓರ್ವ ಮಹಿಳೆ ಸೇರಿದಂತೆ ಐದು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ದೆಹಲಿ ನ್ಯಾಯಾಲಯದಲ್ಲಿ ಇಂದು ಚಾರ್ಜ್‌ಶೀಟ್ ಸಲ್ಲಿಸಿದೆ.
ದೆಹಲಿಯ ಜಹನ್ಜೈಬ್ ಸಮಿ, ಕಾಶ್ಮೀರಿ ಮಹಿಳೆ ಹೀನಾ ಬಶೀರ್, ಹೈದರಾಬಾದ್ನ ಅಬ್ದುಲ್ಲಾ ಬಸಿತ್ ಹಾಗೂ ಪುಣೆಯ ಸದಿಯಾ ಅನ್ವರ್ ಶೇಖ್ ಮತ್ತು ಬೀಲ್ ಸಿದ್ದಿಕ್ ಖತ್ರಿ ಎಂಬ ಐವರ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್/ಐಎಸ್ಕೆಪಿ ನೊಂದಿದೆ ಸಂಬಂಧ ಹೊಂದಿದ್ದ ಇವರು, ಸರ್ಕಾರದ ವಿರುದ್ಧ ಅಸಮಾಧಾನ ಹಾಗೂ ವಿವಿಧ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜದ ಸಾಮರಸ್ಯ ಹಾಳು ಮಾಡುವ ಸಂಚು ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಈ ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಲಾಗಿದೆ. ಬೇರೆ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ಸಮಿ ಮತ್ತು ಇವನ ಪತ್ನಿ ಹೀನಾ ಅವರನ್ನು ಮಾ. 8 ರಂದು ದಕ್ಷಿಣ ದೆಹಲಿಯ ಜಾಮಿಯಾ ನಗರದ ಪೊಲೀಸರು ಬಂಧಿಸಿದ್ದರ ಬಗ್ಗೆ ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟಗೊಂಡಿತ್ತು.