ತಿರುನೆಲ್ವೇಲಿ( ತಮಿಳುನಾಡು): ಮನೆಯವರ ವಿರೋಧದ ನಡುವೆ ವಿವಾಹವಾದ ಜೋಡಿಯ ಜೀವನವನ್ನು ಅವರ ಪೋಷಕರೇ ಕೊನೆಗಾಣಿಸಿದ್ದಾರೆ ಎನ್ನಲಾಗಿದೆ. ತಿರುನೆಲ್ವೇಲಿ ಜಿಲ್ಲೆಯ ನಂಕುನೆರಿಯಲ್ಲಿನ ನಂಬಿರಾಜನ್ (23) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ.
ನಂಬಿರಾಜನ್, ವನ್ಮತಿ (17) ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದ. ಒಂದೇ ಜಾತಿಯವರಾದರೂ ಬಾಲಕಿಗೆ ವಯಸ್ಸಾಗಿಲ್ಲದ ಕಾರಣ ಪೋಷಕರ ತೀವ್ರ ವಿರೋಧವಿತ್ತು. ಅಲ್ಲದೇ ವನ್ಮತಿಯ ಸಹೋದರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕವೂ ನಂಬಿರಾಜನ್ ಮತ್ತು ವನ್ಮತಿ ಕಳೆದ ತಿಂಗಳು ವಿವಾಹವಾಗಿದ್ದರು.
ವಿವಾಹವಾದ ಜೋಡಿ ನೆಲ್ಲೈ ಪಟ್ಟಣದ ಸಂಬಂಧಿಕರ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಆದರೀಗ ನಂಬಿರಾಜನ್ ಮೃತ ದೇಹ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ನವ ವಿವಾಹಕ್ಕೆ ಪೋಷಕರ ವಿರೋಧದ ನಡುವೆ ಕಾಲಿಟ್ಟಿದ್ದ ಪ್ರೀತಿಯ ಪಯಣ ಅಂತ್ಯವಾಗಿದೆ.
ಇನ್ನು ಮೃತ ದೇಹ ಸಿಕ್ಕ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಪಾಲಯಾಮ ಕೊಟ್ಟೈ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ನಂಬಿರಾಜನ್ನ್ನು ಆತನ ಪತ್ನಿಯ ಸಹೋದರ ರಾಜಿಗಾಗಿ ಕರೆಸಿಕೊಂಡು ಕೊಲೆ ಮಾಡಿರಬಹುದು ಎನ್ನಲಾಗಿದೆ. ಈ ಹಿನ್ನೆಲೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.