ನವದೆಹಲಿ: ಸಾಬೂನು ಮತ್ತು ಶುದ್ಧ ನೀರಿನ ಕೊರತೆಯಿಂದಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ರಾಷ್ಟ್ರಗಳಲ್ಲಿ 2 ಶತಕೋಟಿಗಿಂತಲೂ ಹೆಚ್ಚು ಜನರಲ್ಲಿ ಅಂದರೆ ವಿಶ್ವದ ಜನಸಂಖ್ಯೆಯ ಕಾಲು ಭಾಗ ಮಂದಿಗೆ ಕೊರೊನಾ ವೈರಸ್ ಹರಡುವ ಸಾಧ್ಯತೆಯಿದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿನ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ.
ಎನ್ವಿರಾನ್ಮೆಂಟಲ್ ಹೆಲ್ತ್ ಪರ್ಸ್ಪೆಕ್ಟಿವ್ಸ್ ಎಂಬ ಜರ್ನಲ್ನಲ್ಲಿ ಕಳೆದ ವಾರ ಪ್ರಕಟವಾದ ಅಧ್ಯಯನದ ಪ್ರಕಾರ, ಉಪ-ಸಹಾರನ್ ಆಫ್ರಿಕಾ ಮತ್ತು ಓಷಿಯಾನಿಯಾದ 50% ಕ್ಕಿಂತ ಹೆಚ್ಚು ಜನರಿಗೆ ಪರಿಣಾಮಕಾರಿಯಾದ ಸ್ವಚ್ಛತೆಗೆ ಬೇಕಾದ ವಸ್ತುಗಳ ಲಭ್ಯತೆಯಿಲ್ಲ.
ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಪ್ರಮುಖ ಕ್ರಮಗಳಲ್ಲಿ ಕೈ ತೊಳೆಯುವುದು ಒಂದು. ಆದರೆ ಸೀಮಿತ ಆರೋಗ್ಯ ರಕ್ಷಣೆ ಸಾಮರ್ಥ್ಯವನ್ನು ಹೊಂದಿರುವ ಅನೇಕ ದೇಶಗಳಲ್ಲಿ ಇದರ ಲಭ್ಯವಿಲ್ಲ ಎಂಬುದು ಬೇಸರದ ಸಂಗತಿ ಎಂದು ಐಹೆಚ್ಎಂಇ ಪ್ರಾಧ್ಯಾಪಕ ಡಾ. ಮೈಕೆಲ್ ಬ್ರೌಯರ್ ಹೇಳಿದ್ದಾರೆ.
46 ದೇಶಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಜನರಿಗೆ ಸೋಪ್ ಮತ್ತು ಶುದ್ಧ ನೀರಿನ ಸೌಲಭ್ಯವಿಲ್ಲ. ನೈಜೀರಿಯಾ, ಚೀನಾ, ಇಥಿಯೋಪಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಬಾಂಗ್ಲಾದೇಶ, ಪಾಕಿಸ್ತಾನ, ಭಾರತ ಮತ್ತು ಇಂಡೋನೇಷ್ಯಾದಲ್ಲಿ, ತಲಾ 50 ದಶಲಕ್ಷಕ್ಕೂ ಹೆಚ್ಚು ಜನರು ಕೈ ತೊಳೆಯಲು ಬೇಕಾದ ಅಗತ್ಯತೆಗಳನ್ನು ಹೊಂದಿಲ್ಲ ಎಂದು ಅಂದಾಜಿಸಲಾಗಿದೆ.
ಹ್ಯಾಂಡ್ ಸ್ಯಾನಿಟೈಜರ್ ಅಥವಾ ವಾಟರ್ ಟ್ರಕ್‌ಗಳಂತಹ ತಾತ್ಕಾಲಿಕ ಪರಿಹಾರಗಳು ಅಷ್ಟೇ ಇಲ್ಲಿವೆ ಎಂದು ಬ್ರೌಯರ್ ಹೇಳಿದರು. ಆದರೆ, ಕೋವಿಡ್ನಿಂದ ರಕ್ಷಿಸಲು ದೀರ್ಘಕಾಲೀನ ಪರಿಹಾರಗಳನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಸ್ವಚ್ಛತೆ ಕೊರತೆಯಿಂದ ಪ್ರತಿವರ್ಷ 7,00,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂದು ಬ್ರೌಯರ್ ಹೇಳಿದರು.
ವಿಶ್ವದ ಜನಸಂಖ್ಯೆಯ 25 ಪ್ರತಿಶತದಷ್ಟು ಜನರು ಪರಿಣಾಮಕಾರಿಯಾದ ಕೈ ತೊಳೆಯುವ ಸೌಲಭ್ಯಗಳನ್ನು ಹೊಂದಿಲ್ಲ. 1990 ಮತ್ತು 2019 ರ ನಡುವೆ ಅನೇಕ ದೇಶಗಳಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬಂದಿವೆ ಎಂದು ಬ್ರೌಯರ್ ತಿಳಿಸಿದರು.
ಶಾಲೆಗಳು, ಕೆಲಸದ ಸ್ಥಳಗಳು, ಆರೋಗ್ಯ ಸೌಲಭ್ಯಗಳು ಮತ್ತು ಮಾರುಕಟ್ಟೆಗಳಂತಹ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕೈ ತೊಳೆಯುವ ಸೌಲಭ್ಯಗಳ ಅಗತ್ಯತೆ ಇದೆ.
ಈ ತಿಂಗಳ ಆರಂಭದಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದ ಮೊದಲ ವರ್ಷದಲ್ಲಿ ಆಫ್ರಿಕಾದಲ್ಲಿ 1,90,000 ಜನರು ಕೋವಿಡ್ನಿಂದ ಸಾಯಬಹುದು. ಖಂಡದ 1.3 ಶತಕೋಟಿ ಜನರಲ್ಲಿ 44 ದಶಲಕ್ಷದಷ್ಟು ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಊಹಿಸಿತ್ತು.