ನವದೆಹಲಿ: ಭಯೋತ್ಪಾದಕ ದಾಳಿ ಸೇರಿದಂತೆ ಅನೇಕ ಅಪರಾಧ ಕೃತ್ಯಗಳ ಕುರಿತು ಇಂದಿನ ರಾಜ್ಯಸಭಾ ಕಲಾಪದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲಿಖಿತ ರೂಪದಲ್ಲಿ ಮಾಹಿತಿ ಹಾಗೂ ಉತ್ತರ ನೀಡಿದ್ದಾರೆ.
ಎಡಪಂಥೀಯ ಉಗ್ರ ಪೀಡಿತ ಪ್ರದೇಶಗಳು:
11 ರಾಜ್ಯಗಳ 90 ಜಿಲ್ಲೆಗಳನ್ನು ಎಡಪಂಥೀಯ ಉಗ್ರ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದೆ. ಎಡಪಂಥೀಯ ಉಗ್ರವಾದ ಸಂಬಂಧಿತ ಹಿಂಸಾತ್ಮಕ ಘಟನೆಗಳು 2019ರಲ್ಲಿ 61 ಜಿಲ್ಲೆಗಳಲ್ಲಿ ಮತ್ತು 2020ರ ಮೊದಲಾರ್ಧದಲ್ಲಿ 46 ಜಿಲ್ಲೆಗಳಲ್ಲಿ ವರದಿಯಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.
2020ರಲ್ಲಿ 34 ಭದ್ರತಾ ಸಿಬ್ಬಂದಿ ಹುತಾತ್ಮ:
ಈ ವರ್ಷದ ಜನವರಿಯಿಂದ ಆಗಸ್ಟ್ 15ರವರೆಗೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಒಟ್ಟು 34 ಭದ್ರತಾ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಹಾಗೂ 68 ನಾಗರಿಕರು, 54 ಎಡಪಂಥೀಯ ಉಗ್ರಗಾಮಿಗಳು ಬಲಿಯಾಗಿದ್ದಾರೆ. 241 ಎಡಪಂಥೀಯ ಉಗ್ರಗಾಮಿಗಳು ಶರಣಾಗಿದ್ದಾರೆ. 2019ರ ಆಗಸ್ಟ್ 5ರಿಂದ 2020ರ ಆಗಸ್ಟ್ 31ರವರೆಗೆ ಜಮ್ಮು ಮತ್ತು ಕಾಶ್ಮೀರವೊಂದರಲ್ಲೇ ನಡೆದ ಭಯೋತ್ಪಾದಕ ದಾಳಿಗಳಲ್ಲಿ 45 ನಾಗರಿಕರು ಮತ್ತು 49 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಚಿವರು ನೀಡಿದ್ದಾರೆ.
ಎನ್‌ಎಸ್‌ಎ ರದ್ದು ಕುರಿತು ಯಾವುದೇ ಪ್ರಸ್ತಾಪವಿಲ್ಲ:
2017 ಮತ್ತು 2018ರಲ್ಲಿ ದೆಹಲಿ ಹೊರತುಪಡಿಸಿ ದೇಶಾದ್ಯಂತ ಸುಮಾರು 1,200 ಜನರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 563 ಮಂದಿ ಜೈಲಿನಲ್ಲಿದ್ದಾರೆ. ಹಾಗೆಯೇ ಕಳೆದ 5 ವರ್ಷಗಳಲ್ಲಿ ಎನ್‌ಎಸ್‌ಎ ಅಡಿ ದೆಹಲಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಎನ್‌ಎಸ್‌ಎ ರದ್ದುಗೊಳಿಸುವ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
2020ರ ಜನವರಿ 1ರಿಂದ ಜುಲೈ 31ರವರೆಗೆ ನವದೆಹಲಿಯ ಸಂಸದರ ಫ್ಲಾಟ್ ಅಥವಾ ಬಂಗಲೆಗಳಲ್ಲಿ 13 ಕಳ್ಳತನ ಪ್ರಕರಣಗಳು ಮತ್ತು ಇತರ ಅಪರಾಧಗಳು ನಡೆದಿವೆ. ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಕಿಶನ್ ಹೇಳಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನೀಡಿರುವ ಮಾಹಿತಿಯಂತೆ ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇತರ ವೃತ್ತಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದರೂ ರೈತರು ಅಥವಾ ಕೃಷಿ ಕಾರ್ಮಿಕರ ಆತ್ಮಹತ್ಯೆ ವರದಿಯಾಗಿಲ್ಲ ಎಂಬುದನ್ನೇ ಇದೇ ವೇಳೆ ಸಚಿವರು ತಿಳಿಸಿದ್ದಾರೆ.