ಪ್ರಪಂಚದ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಧ್ವಜವಿದೆ. ಇದು ಮುಕ್ತ ದೇಶದ ಸಂಕೇತವಾಗಿದೆ. ಭಾರತದ ರಾಷ್ಟ್ರೀಯ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿದ್ದು, ತ್ರಿವರ್ಣ ಧ್ವಜವಾಗಿದೆ. ಬಿಳಿಭಾಗದ ಮಧ್ಯದಲ್ಲಿ ಅಶೋಕ ಚಕ್ರವಿದೆ.
ಭಾರತದ ಮೊದಲ ಧ್ವಜ 1906 ರಲ್ಲಿ ರಚನೆಯಾಯಿತು. ಕೋಲ್ಕತ್ತಾದ ಬಗಾನ್ ಚೌಕ್ನಲ್ಲಿ ಹಾರಿಸಲಾಯಿತು. ಬಳಿಕ ಕೆಲವು ಮಾರ್ಪಾಡುಗಳೊಂದಿಗೆ ಸ್ವಾತಂತ್ರ್ಯದ ವೇಳೆಗೆ ಪೂರ್ಣಕ್ಕೆ ಬಂದಿತ್ತು. ಇಂದು ನಾವು ಹಾರಿಸುವ ತ್ರಿವರ್ಣ ಧ್ವಜಕ್ಕಿಂತ ಮುಂಚೆ ಭಾರತದಲ್ಲಿ ದೇಶ ಪ್ರೇಮದ ಪ್ರತೀಕವಾಗಿ ಐದು ಬಾವುಟಗಳನ್ನು ಹಾರಿಸಲಾಗಿತ್ತು. 1931ರಲ್ಲಿ ಈಗಿನ ರಾಷ್ಟ್ರಧ್ವಜ ರಚನೆ ಆಯಿತು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಸೂಚನೆ ಮೇರೆಗೆ ಬಾವುಟದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಕ್ಕೆ ಮಹತ್ವ ನೀಡಲಾಯಿತು. ಮಧ್ಯೆ ಅಶೋಕ ಚಕ್ರ ಇರಿಸಲಾಯಿತು. ಹೀಗೆ ತಯಾರಾದ ಬಾವುಟವನ್ನು ರಾಷ್ಟ್ರೀಯ ಧ್ವಜವಾಗಿ ಅಳವಡಿಸಿಕೊಳ್ಳಲು ಡಾ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಜುಲೈ 22, 1947 ರಂದು ರಾಷ್ಟ್ರೀಯ ಧ್ವಜಕ್ಕೆ ಅಂಗೀಕಾರ ದೊರೆಯಿತು.
ಇಡೀ ರಾಷ್ಟ್ರವನ್ನು ಪ್ರತಿನಿಧಿಸುವ ಭಾರತೀಯ ಧ್ವಜದ ಬಗ್ಗೆ ಜನರಿಗೆ ಅರಿವು ಮೂಡಿಸಲು ಜುಲೈ 22 ರಂದು ರಾಷ್ಟ್ರೀಯ ಧ್ವಜ ಸ್ವೀಕಾರ ದಿನವನ್ನು ಆಚರಿಸಲಾಗುತ್ತದೆ. ಜುಲೈ 22 ರಂದು ಭಾರತೀಯ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ.
ತ್ರಿವರ್ಣ ಧ್ವಜದಲ್ಲಿ ಕೇಸರಿ- ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಬಿಳಿ- 24 ಕಡ್ಡಿಗಳನ್ನು ಹೊಂದಿರುವ ಧರ್ಮ ಚಕ್ರದೊಂದಿಗೆ ಶಾಂತಿ ಮತ್ತು ಸತ್ಯವನ್ನು ಸೂಚಿಸುತ್ತದೆ. ಹಸಿರು- ಇದು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಶುಭವನ್ನು ಪ್ರತಿಬಿಂಬಿಸುತ್ತದೆ.
ಭಾರತೀಯ ಧ್ವಜದ ಬಗ್ಗೆ ಆಸಕ್ತಿ ವಹಿಸುವ ಅಂಶಗಳು :
- ಮೇಡಂ ಭಿಕಾಜಿ ಕಾಮಾ 1907 ರ ಆಗಸ್ಟ್ 22 ರಂದು ಜರ್ಮನಿಯ ಸ್ಟಟ್‌ಗ್ರಾಟ್‌ನಲ್ಲಿ ಧ್ವಜ ಹಾರಿಸಿದ ಮೊದಲ ಮಹಿಳೆ.
- ಭಾರತೀಯ ಧ್ವಜವನ್ನು ವಿಶ್ವದ ಅತ್ಯುನ್ನತ ಪರ್ವತ ಶಿಖರ, ಮೌಂಟ್ ಎವರೆಸ್ಟ್ನಲ್ಲಿ ಮೇ 29, 1953 ರಂದು ಹಾರಿಸಲಾಯಿತು.
- 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದಾಗ ತ್ರಿವರ್ಣ ಧ್ವಜವನ್ನು ಬಾಹ್ಯಾಕಾಶದಲ್ಲಿ ಹಾರಿಸಿದರು. ಇವರು ಬಾಹ್ಯಾಕಾಶಕ್ಕೆ ತೆರಳಿದ ಭಾರತದ ಮೊದಲ ಗಗನಯಾತ್ರಿ.