ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮತ್ತೊಂದು ಮೈಲುಗಲ್ಲು ನಟ್ಟಿದ್ದಾರೆ. ಹೌದು, ದೀರ್ಘಕಾಲ ಆಡಳಿತ ನಡೆಸಿದ ಭಾರತದ ನಾಲ್ಕನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಗುರುವಾರ ಮೋದಿ ಪಾತ್ರರಾದರು.
ದೇಶದ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವವರಲ್ಲಿ ಜವಾಹರ್ಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ಡಾ.ಮನಮೋಹನ್ ಸಿಂಗ್ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಇದೀಗ ನಾಲ್ಕನೇ ಸ್ಥಾನವನ್ನು ಮೋದಿ ಪಡೆದಿದ್ದಾರೆ.
ಇನ್ನು, ಕಾಂಗ್ರೆಸ್ಸೇತರ ಪ್ರಧಾನಿಗಳಲ್ಲಿ ಮೋದಿ ಅವರೇ ದೀರ್ಘಕಾಲ ಆಡಳಿತ ನಡೆಸಿದ ಮೊದಲ ಪ್ರಧಾನಿ ಎನ್ನುವುದು ವಿಶೇಷ. 2014ರ ಮೇ 26ರಂದು ಮೊದಲ ಬಾರಿಗೆ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ 2019ರ ಮೇ 30 ರಂದು ಎರಡನೇ ಬಾರಿ ಪ್ರಧಾನಿಯಾಗಿ ಗದ್ದುಗೆ ಏರಿದರು.
ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಇರುವಾಗಲೇ ಪ್ರಧಾನಿ ಮೋದಿ ಅವರು ದೀರ್ಘಕಾಲ ದೇಶದ ಪ್ರಧಾನಿಯಾದ ನಾಲ್ಕನೇ ಪ್ರಧಾನಿಯಾಗಿರುವುದು ವಿಶೇಷ. ಆ.15 ರಂದು ಮೋದಿ ಅವರು ಕೆಂಪು ಕೋಟೆಯಿಂದ 7ನೇ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಲಿದ್ದಾರೆ.
ದೇಶದ ಪ್ರಧಾನಿಯಾಗಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದವರಲ್ಲಿ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರೇ ಮೊದಲಿಗರು. ಇವರು 17 ವರ್ಷಗಳ ಕಾಲ ಆಡಳಿತ ನಿರ್ವಹಿಸಿದ್ದರು. ಆ ನಂತರದ ಸ್ಥಾನದಲ್ಲಿ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಅವರು ಮೊದಲ ಎರಡು ಅವಧಿ 11 ವರ್ಷ ಮತ್ತು ಬಳಿಕ ಸುಮಾರು ಐದು ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಡಾ.ಮನಮೋಹನ್ ಸಿಂಗ್ ಅವರು ಸತತವಾಗಿ ಎರಡು ಅವಧಿಗೆ ಅಂದ್ರೆ ಒಟ್ಟು 10 ವರ್ಷ ದೇಶದ ಪ್ರಧಾನಿ ಹುದ್ದೆಯಲ್ಲಿದ್ದರು.
ಅವಧಿ ಪೂರ್ಣಗೊಳಿಸದ ಕಾಂಗ್ರೆಸ್ಸೇತರ ಪ್ರಧಾನಿಗಳು:
ಮೊರಾರ್ಜಿ ದೇಸಾಯಿ (ಮಾರ್ಚ್ 24, 1977 - ಜುಲೈ 28, 1979), ಚರಣ್ ಸಿಂಗ್ (ಜುಲೈ 28, 1979 - ಜನವರಿ 14, 1980), ವಿಶ್ವನಾಥ್ ಪ್ರತಾಪ್ ಸಿಂಗ್ (ಡಿಸೆಂಬರ್ 2, 1989 - ನವೆಂಬರ್ 10, 1990), ಚಂದ್ರಶೇಖರ್ (ನವೆಂಬರ್ 10, 1990 -- ಜೂನ್ 21, 1991), ಹೆಚ್.ಡಿ.ದೇವೇಗೌಡ (ಜೂನ್ 1, 1996 -- ಏಪ್ರಿಲ್ 21, 1997) ಮತ್ತು ಐ.ಕೆ.ಗುಜ್ರಾಲ್ (ಏಪ್ರಿಲ್ 21, 1997 -- ಮಾರ್ಚ್ 19, 1998).