ಬುಲಂದ್ಶಹರ್ : ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಮಾನವತ್ವದ ಮುಂದೆ ಜಾತಿ, ಧರ್ಮ ಮುಖ್ಯ ಎನಿಸುವುದಿಲ್ಲ ಎಂಬುದಕ್ಕೆ ಉತ್ತರ ಪ್ರದೇಶದ ಬುಲಂದ್ಶಹರ್ನ ಆನಂದ ವಿಹಾರ್ ಪ್ರದೇಶ ಸಾಕ್ಷಿಯಾಗಿ ನಿಂತಿದೆ. ಇಲ್ಲಿ ಶನಿವಾರ ನಿಧನರಾದ ಹಿಂದೂ ವ್ಯಕ್ತಿಯೊಬ್ಬರ ಅಂತಿಮ ವಿಧಿ-ವಿಧಾನವನ್ನು ಮುಸ್ಲಿಮರೇ ಮುಂದೆ ನಿಂತು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್ನಿಂದ ರವಿಶಂಕರ್ (73) ಎಂಬುವರು ಮೃತಪಟ್ಟಿದ್ದರು. ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದಲ್ಲಿ ಜಾರಿಗೆ ತಂದಿರುವ ಲಾಕ್ಡೌನ್ನಿಂದಾಗಿ ಆತನ ಸಂಬಂಧಿಕರು ಅಂತ್ಯಕ್ರಿಯೆಗೆ ಬರಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ನೆರೆಹೊರೆಯ ಮುಸ್ಲಿಮರೇ ಅಂತ್ಯಕ್ರಿಯೆಗೆ ಕೈ ಜೋಡಿಸಿದ್ದಾರೆ. ಮುಸ್ಲಿಂ ಬಾಂಧವರ ಈ ಸೇವೆಗೆ ಧನ್ಯವಾದ ಹೇಳಿ ಆತನ ಕುಟುಂಬದ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ. ಮೃತನಿಗೆ ನಾಲ್ವರು ಮಕ್ಕಳಿದ್ದಾರೆ. ಅವರಲ್ಲಿ ಇಬ್ಬರು ಗಂಡು, ಇಬ್ಬರು ಹೆಣ್ಣು. ಸಹೋದರರಿಬ್ಬರೂ ರವಿಶಂಕರ್ ಅವರನ್ನು ನೋಡಿಕೊಳ್ಳುತ್ತಿದ್ದರು.
ಮೃತನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ನೆರಹೊರೆಯ ಮುಸ್ಲಿಮರು, ದಾರಿಯುದ್ದಕ್ಕೂ 'ರಾಮ್ ನಾಮ್ ಸತ್ಯ ಹೈ' ಅಂತಾ ಜಪಿಸಿದರು. ಅಲ್ಲದೆ ಹಿಂದೂ ಸಂಪ್ರದಾಯದಂತೆಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಧನ್ಯತೆ ಮೆರೆದರು. ಅಂತ್ಯಕ್ರಿಯೆಗೆ ಆತನ ಕುಟುಂಬದಲ್ಲಿ ಯಾರೂ ಇರಲಿಲ್ಲ. ಆಗ ನಾವೆಲ್ಲ ಒಟ್ಟಾಗಿ ಸಹಾಯ ಮಾಡಿದೆವು. ಮಾನವೀಯತೆ ಎಲ್ಲದಕ್ಕಿಂತ ಹೆಚ್ಚು ಎಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಮೊಹಮ್ಮದ್ ಜುಬೈರ್ ಹೇಳಿದ್ದಾರೆ.
ಲಾಕ್ಡೌನ್ ಅವಧಿಯಲ್ಲೂ ಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ನೆರೆಹೊರೆಯವರು ಕೈಲಾದ ಸಹಾಯ ಮಾಡಿದ್ದಾರೆ. ಅವರಿಗೆ ನನ್ನ ಕುಟುಂಬವು ಜೀವನ ಪರ್ಯಂತ ಋಣಿಯಾಗಿರುತ್ತದೆ ಎಂದರು.