ಹೈದರಾಬಾದ್: ಕೊಲೆ ಆರೋಪದ ಮೇಲೆ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದ 39 ವರ್ಷದ ಯುವಕನೊಬ್ಬ ತಾನು ಬಾಲ್ಯದಲ್ಲಿ ಕಂಡಿದ್ದ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾನೆ.
ಈ ಕೊಲೆ ಅಪರಾಧಿ ಹೆಸರು ಸುಭಾಷ್ ಪಾಟೀಲ್. 2012ರಲ್ಲಿ ಈತ ಅಬಕಾರಿ ಗುತ್ತಿಗೆದಾರನೊಬ್ಬನ ಕೊಲೆ ಮಾಡಿ ಬೆಂಗಳೂರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದ. ಈತನೊಂದಿಗೆ ಈತನ ಪ್ರಿಯತಮೆ ಕೂಡಾ ಜೀವಾವಾಧಿ ಶಿಕ್ಷೆಗೊಳಪಟ್ಟು ಜೈಲುವಾಸಿಯಾಗಿದ್ದಳು. ಆದರೆ, ಕಳೆದ 2016ರ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಜೈಲಿನಲ್ಲಿ ಸಭ್ಯ ಹಾಗೂ ಉತ್ತಮ ನಡವಳಿಕೆಯ ಹಿನ್ನೆಲೆಯಲ್ಲಿ ಇವರಿಬ್ಬರೂ ಬಿಡುಗಡೆಯಾಗಿದ್ದರು. ಹೀಗಾಗಿ ಸುಭಾಷ್ ಪಾಟೀಲ್ ತಾನು ಬಾಲ್ಯದಲ್ಲಿ ವೈದ್ಯನಾಗುವ ಕನಸು ಕಂಡಿದ್ದಂತೆ. ಈಗ ಬಿಳಿ ಕೋಟು ಹಾಕಿ ವೈದ್ಯನಾಗುತ್ತಿದ್ದಾನೆ.
ಕೊಲೆ ಆರೋಪವೇನು...!
2002ರಲ್ಲಿ ಅಬಕಾರಿ ಗುತ್ತಿಗೆದಾರನಾದ ಅಶೋಕ್ ಗುತ್ತೇದಾರ್ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದರಿಂದಾಗಿ ಸುಭಾಷ್ ಪಾಟೀಲ್ ಹಾಗೂ ಆತನ ಪ್ರಿಯತಮೆ ಪದ್ಮಾವತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್ ಇವರಿಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಬಿಡುಗಡೆಯಾಗಿರುವ ಸುಭಾಷ್ ಪಾಟೀಲ್ ತಮ್ಮ ಎಂಬಿಬಿಎಸ್ ಕೋರ್ಸ್ ಮುಗಿಸಿದ್ದಾರೆ.
ಕಲಬುರಗಿಯ ಅಫ್ಜಲ್ಪುರ ತಾಲೂಕಿನ ಭೋಸ್ಗಾದವನಾದ ಸುಭಾಷ್ ಪಾಟೀಲ್, ಕಲಬುರಗಿಯ ಏಂಆರ್ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದ. ಈತನಿಂದ ಕೊಲೆಯಾದ ಅಶೋಕ್ ಗುತ್ತೇದಾರ್ ಮನೆ ಪಕ್ಕದಲ್ಲೇ ಈತನೂ ವಾಸವಿದ್ದ. ಅಲ್ಲಿಂದಲೇ ಅಶೋಕ್ ಪತ್ನಿ ಪದ್ಮಾವತಿ ಹಾಗೂ ಸುಭಾಷ್ ನಡುವೆ ಪ್ರೀತಿ ಶುರುವಾಗಿಬಿಟ್ಟಿತ್ತು. ಹೀಗಾಗಿ, ತನ್ನ ಪತ್ನಿ ಜೊತೆಗಿನ ಪ್ರೀತಿ ಮುಂದುವರಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಅಶೋಕ್ ಗುತ್ತೇದಾರ್, ಸುಭಾಷ್ಗೆ ಬೆದರಿಕೆ ಹಾಕಿದ್ದರು. ಇದೇ ಬೆದರಿಕೆ ಸುಭಾಷ್ಗೆ ಅಶೋಕ್ನನ್ನೇ ಮುಗಿಸುವಂತೆ ಪ್ರೇರೇಪಿಸಿತು. ಶೂಟ್ ಮಾಡಿ ಕೊಲೆ ಮಾಡುವಂತೆ ಮಾಡಿತ್ತು.
ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸುಭಾಷ್ ತನ್ನ ಕನಸನ್ನು ಕೈಬಿಟ್ಟಿರಲಿಲ್ಲ. ಜೈಲಿನಲ್ಲೇ ವೈದ್ಯರಿಗೆ ಸಹಾಯ ಮಾಡುತ್ತಿದ್ದ. 2008ರಲ್ಲಿ ಜೈಲಿನಲ್ಲಿದ್ದ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಕ್ಕಾಗಿ ನಾನು ಆರೋಗ್ಯ ಇಲಾಖೆಯಿಂದ ಗೌರವಿಸಲ್ಪಟ್ಟಿದ್ದೆ ಎಂದು ಸುಭಾಷ್ ಹೇಳಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಹಾಗೂ ಎಂಎ ಮುಗಿಸಿದ ಸುಭಾಷ್, 2016ರಲ್ಲಿ ಅರ್ಧಕ್ಕೆ ಮೊಟಕುಗೊಂಡಿದ್ದ ಎಂಬಿಬಿಎಸ್ ಕೋರ್ಸ್ ಮುಂದುವರಿಸಲು ಅವಕಾಶ ನೀಡುವಂತೆ ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ಗೆ ಮನವಿ ಮಾಡಿದ್ದರು. ಕಾನೂನು ಪ್ರಕಾರವಾಗಿ ಒಂದು ತಿಂಗಳ ಬಳಿಕ ಸುಭಾಷಗ್ಗೆ ಕೋರ್ಸ್ ಮುಂದುವರಿಸಲು RGUHS ಅವಕಾಶ ನೀಡಿತು. 2016ರ ಅಕ್ಟೋಬರ್ನಲ್ಲಿ ಮತ್ತೆ ಎಂಬಿಬಿಎಸ್ ಕೋರ್ಸ್ಗೆ ಸೇರಿಕೊಂಡ ಸುಭಾಷ್, ಇದೇ ವರ್ಷದ ಫೆಬ್ರವರಿಯಲ್ಲಿ ಅಂತಿಮ ಪರೀಕ್ಷೆಗಳನ್ನು ಮುಗಿಸಿದರು.
ಸದ್ಯ ನಾನು ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದೇನೆ. ನನ್ನ ಬಳಿ ಕರ್ನಾಟಕ ವೈದ್ಯಕೀಯ ಮಂಡಳಿಯ ತಾತ್ಕಾಲಿಕ ನೋಂದಣಿ ಪ್ರಮಾಣಪತ್ರವಿದೆ. ಅದು ನನ್ನ ಇಂಟರ್ನ್ಶಿಪ್ಗೆ ಅಗತ್ಯವಾಗಿದೆ ಎಂದು ಸುಭಾಷ್ ಹೇಳಿದ್ದಾರೆ. ಸೆರೆಮನೆಯಲ್ಲಿದ್ದರೂ ತನ್ನ ಕನಸನ್ನು ಬೆನ್ನತ್ತಿ, ಎಂಬಿಬಿಎಸ್ ಮುಗಿಸಿ ಈಗ ಸ್ಟೆಥೋಸ್ಕೋಪ್ ತೊಟ್ಟು ವೈದ್ಯನಾಗುತ್ತಿದ್ದಾನೆ ಸುಭಾಷ್. ಕೊಲೆಗಾರನಾಗಿ ಬಿಳಿ ಬಟ್ಟೆ ಹಾಕಿಕೊಂಡು ಜೈಲು ಹಕ್ಕಿಯಾಗಿದ್ದವ ಈಗ ಅದೇ ಬಿಳಿ ಏಪ್ರಾನ್ ಹಾಕಿ, ಸ್ಟೆಥೋಸ್ಕೋಪ್‌ನಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ.