ನವದೆಹಲಿ: ಟೆಲಿಕಾಂ ಇಂಡಿಸ್ಟ್ರಿಯಲ್ಲಿ ಸ್ಪರ್ಧೆ ನೀಡದೇ ದರ ಸಮರದ ಭೀತಿ ಎದುರಿಸುತ್ತಿರುವ ಭಾರತೀಯ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಮುಚ್ಚುವ ಭೀತಿ ಎದುರಿಸುತ್ತಿದ್ದು, ಇದೀಗ ಬೇರೆ ಕಂಪನಿಗಳಿಗೆ ಟಕ್ಕರ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಬಿಎಸ್ಎನ್ಎಲ್(ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಮತ್ತು ಎಂಟಿಎನ್ಎಲ್(ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್) ಕುರಿತು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸದ್ಯ ಎರಡು ಕಂಪನಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದು, ಎರಡು ಟೆಲಿಕಾಂ ಕಂಪನಿ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡ ಹೋಗಲು 15,000 ಕೋಟಿ ರೂ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದರ ಜತೆಗೆ ಎರಡು ಕಂಪನಿ ಸಿಬ್ಬಂದಿಗಳಿಗೆ ವಿಆರ್ಎಸ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ ಕೆಲ ವರ್ಷಗಳಿಂದ ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ನಿರಂತರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, 2014-15ರಲ್ಲಿ 672 ಕೋಟಿ, 2015-16ರಲ್ಲಿ 3,885 ಕೋಟಿ ಹಾಗೂ 2016-17ರಲ್ಲಿ 1,684 ಕೋಟಿ ರೂ ನಷ್ಟ ಅನುಭವಿಸಿವೆ. ಇದರ ಜತೆಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್' (ಬಿಎಸ್ಎನ್ಎಲ್) 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಪಾವತಿಸಿಲ್ಲ ಎಂದು ತಿಳಿದು ಬಂದಿತ್ತು.