ತಿರುವನಂತಪುರಂ: ಎಂಪಿಎಲ್‌ಎಡಿ ನಿಧಿ (ಸಂಸದರ ನಿಧಿ)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವ ಕೇಂದ್ರದ ನಿರ್ಧಾರವು ತಪ್ಪು, ಸಂಸತ್ ಸದಸ್ಯರ ಆಯಾ ಕ್ಷೇತ್ರಗಳಲ್ಲಿ ಕೋವಿಡ್ -19 ವಿರುದ್ಧ ಹೋರಾಡಲು ಸಂಸದರ ನಿಧಿ ನೀಡಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡುವಲ್ಲಿ ಸ್ಥಳೀಯಾಡಳಿತ ಪ್ರಮುಖ ಪಾತ್ರ ವಹಿಸುತ್ತಿವೆ. ಹಾಗಾಗಿ ಸ್ಥಳೀಯ ಮಟ್ಟದಲ್ಲಿ ಹಣದ ಅವಶ್ಯಕತೆಯಿದೆ. ಈ ಹಂತದಲ್ಲಿ ಸಂಸದರ ನಿಧಿಯನ್ನು ಸ್ಥಗಿತೊಳಿಸುವ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ. ಆಯಾ ಕ್ಷೇತ್ರಗಳಲ್ಲಿ ಕೊರೊನಾ ವಿರುದ್ಧ ಹೋರಾಡಲು ಎಂಪಿಎಲ್‌ಎಡಿ ನಿಧಿ ನೀಡಬೇಕು ಎಂದು ಪಿಣರಾಯಿ ವಿಜಯನ್ ತಿಳಿಸಿದರು.
ತಿರುವನಂತಪುರಂ ಸಂಸದರು ಸೇರಿದಂತೆ ವಿವಿಧ ಸಂಸದರು ಕೇಂದ್ರದ ನಿರ್ಧಾರವನ್ನು ವಿರೋಧಿಸಿ, ಇದನ್ನು ಪರಿಷ್ಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸ್ಥಳೀಯ ಅಗತ್ಯತೆಗಳನ್ನು ಪೂರೈಸಲು, ದುರ್ಬಲರಿಗೆ ನೆರವಾಗಲು ಮತ್ತು ಕೋವಿಡ್ -19 ಸಂಬಂಧಿತ ವೆಚ್ಚಗಳಿಗಾಗಿ ಸಂಸದರಿಗೆ ಈ ಹಣವನ್ನು ಮೀಸಲಿಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಪ್ರಧಾನ ಮಂತ್ರಿ, ಮಂತ್ರಿಗಳು ಮತ್ತು ಸಂಸದರ ಸಂಬಳವನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪಿಣರಾಯಿ ವಿಜಯನ್ ಶ್ಲಾಘಿಸಿದರು.