ನವದೆಹಲಿ: ವಿಶ್ವದಲ್ಲಿ ಕೋವಿಡ್-19 ತೀವ್ರ ಆತಂಕ ಸೃಷ್ಟಿಸಿದೆ. ಕೊರೊನಾ ಈವರೆಗೂ 30,852 ಮಂದಿಯನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ಸುಮಾರು ಒಟ್ಟು 6,65,164 ಇದ್ದು 1,40,222 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಅಮೆರಿಕದಲ್ಲಿ 1,24,464 ಮಂದಿಗೆ ಸೋಂಕು ತಗುಲಿದ್ದು 1,019 ಮಂದಿ ಅಸುನೀಗಿದ್ದಾರೆ. 1,095 ಮಂದಿಗೆ ಚಿಕಿತ್ಸೆ ನೀಡಿ ಸೋಂಕನ್ನು ಗುಣಪಡಿಸಲಾಗಿದೆ. ಸೋಂಕಿತರ ಸ್ಥಾನದಲ್ಲಿ ಇಟಲಿ ಎರಡನೇ ಸ್ಥಾನದಲ್ಲಿದ್ದು 10,023 ಮಂದಿ ಈವರೆಗೂ ಈ ರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಸಂಭವಿಸಿದ ಒಟ್ಟು ಸಾವುಗಳ ಸಂಖ್ಯೆಯಲ್ಲಿ ಇಟಲಿ ಮೊದಲ ಸ್ಥಾನದಲ್ಲಿದ್ದರೆ, ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ.
ಸ್ಪೇನ್ನಲ್ಲಿ 5,982 ಮಂದಿ ಈವರೆಗೂ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿ ಸೋಂಕಿತರ ಸಂಖ್ಯೆ 73,235 ಇದ್ದು 12,285 ಮಂದಿಯನ್ನು ಗುಣಪಡಿಸಲಾಗಿದೆ. ಸ್ಪೇನ್ನ ರಾಜಧಾನಿ ಮ್ಯಾಡ್ರಿಡ್ ಕೊರೊನಾ ದಾಳಿಗೆ ಮಾರಕವಾಗಿ ತುತ್ತಾಗಿದೆ. ಇಟಲಿಯಂತೆ ಇಲ್ಲೂ ಕೂಡಾ ಮಾರಕ ಸೋಂಕು ತನ್ನ ರುದ್ರನರ್ತನ ತೋರುತ್ತಿದೆ. ಸಾವಿನ ಸಂಖ್ಯೆಯಲ್ಲಿ ನಂತರದ ಸ್ಥಾನಗಳಲ್ಲಿ ಇರಾನ್, ಫ್ರಾನ್ಸ್ ಹಾಗೂ ಇಂಗ್ಲೆಂಡ್ ರಾಷ್ಟ್ರಗಳಿವೆ. ಸೋಂಕಿತರ ಸಂಖ್ಯೆಯಲ್ಲಿ ಸ್ಪೇನ್ ನಂತರ ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ರಾಷ್ಟ್ರಗಳಿವೆ.