21 ನೇ ಶತಮಾನದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ತಮ್ಮ ಬಹುತೇಕ ಸಮಯವನ್ನು ಕಳೆಯುತ್ತಾರೆ. ವಿಶೇಷವಾಗಿ ಯುವಜನರಿಗೆ ಈ ಮೊಬೈಲ್ ಗೀಳು ಹೆಚ್ಚಾಗಿರುತ್ತೆ. ಈ ಗೀಳಿಗೆ ಬಿದ್ದವರಿಗೆ ಶಾಕಿಂಗ್ ಸುದ್ದಿಯೊಂದನ್ನು ಸಂಶೋಧಕರು ನೀಡಿದ್ದಾರೆ...
ಇತ್ತೀಚೆಗೆ ಬಿಡುಗಡೆಯಾಗಿರುವ ಸಂಶೋಧನಾ ವರದಿ ಪ್ರಕಾರ ಒಂದು ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರಿಗೆ ಅಪಾಯ ಗ್ಯಾರಂಟಿ ಅನ್ನೋ ಅಂಶ ತಿಳಿದುಬಂದಿದೆ. ಅತಿಯಾಗಿ ಮೊಬೈಲ್ ಬಳಸುವವರ ಪೈಕಿ ಶೇಕಡ 43 ರಷ್ಟು ಬೊಜ್ಜನ್ನು ಹೆಚ್ಚಿಸುವ ಮತ್ತು ಹೃದ್ರೋಗದ ಅಪಾಯವನ್ನು ಎದುರು ನೋಡುತ್ತಾರೆ ಎಂದು ಹೇಳಲಾಗಿದೆ.
ಜೂನ್ನಿಂದ ಡಿಸೆಂಬರ್ 2018ವರೆಗೆ ಸೈಮನ್ ಬೊಲಿವಾರ್ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ವಿಭಾಗದ 1060 ವಿದ್ಯಾರ್ಥಿಗಳನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು. ಸಂಶೋಧನೆಗಾಗಿ ಸರಾಸರಿ 19 ವರ್ಷ ಮತ್ತು 20 ವರ್ಷ ವಯಸ್ಸಿನ 700 ಮಹಿಳೆಯರು ಮತ್ತು 360 ಪುರುಷರನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಶೇಕಡಾ 36.1 ರಷ್ಟು ಅಧಿಕ ತೂಕ ಮತ್ತು 42.6 ರಷ್ಟು ಬೊಜ್ಜು ಹೊಂದಿರುವ ಪುರುಷರು ಮತ್ತು ಶೇಕಡಾ 63.9 ರಷ್ಟು ಅಧಿಕ ತೂಕ ಮತ್ತು 57.4 ರಷ್ಟು ಬೊಜ್ಜು ಹೊಂದಿರುವ ಮಹಿಳೆಯರಿದ್ದರು.
ಒಟ್ಟಾರೆ ಸಂಶೋಧನೆಯಲ್ಲಿ ಸಂಶೋಧಕರ ಪ್ರಕಾರ, ದಿನಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸಿದರೆ ಸ್ಥೂಲಕಾಯದ ಅಪಾಯವು ಶೇಕಡಾ 43 ರಷ್ಟು ಹೆಚ್ಚಾಗಿ ಕಂಡು ಬರುತ್ತೆ ಅನ್ನೋದನ್ನು ತಿಳಿದುಕೊಂಡಿದ್ದಾರೆ. ಏಕೆಂದರೆ ಸಂಶೋಧನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬಳಸುವುದರೊಂದಿಗೆ ಸ್ವೀಟ್ ಡ್ರಿಂಕ್ಸ್, ಫಾಸ್ಟ್ ಫುಡ್ ಮತ್ತು ಸಿಹಿ ತಿಂಡಿಗಳನ್ನು ಎರಡು ಪಟ್ಟು ಹೆಚ್ಚು ತಿನ್ನುತ್ತಾರೆ. ಆದ್ರೆ ದೈಹಿಕ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ ಅನ್ನೋದನ್ನು ಸಂಶೋಧಕರು ದೃಢಪಡಿಸಿದ್ದಾರೆ.