ಶಿಮ್ಲಾ: ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ 'ಅಟಲ್ ಟನಲ್' ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಹಿಮಾಚಲ ಪ್ರದೇಶದ ರೋಹ್ಟಂಗ್ನಲ್ಲಿ ಅಕ್ಟೋಬರ್ 3 ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಹಲವು ಶಾಸಕರು ಸೇರಿದಂತೆ ಇತರ ಗಣ್ಯರು ಪಾಲ್ಗೊಂಡಿದ್ದರು. ಇವರಲ್ಲಿ ಕುಲ್ಲು ಜಿಲ್ಲೆಯ ಬಂಜಾರ ಕ್ಷೇತ್ರದ ಶಾಸಕ ಸುರೇಂದ್ರ ಶೌರಿ ಅವರಿಗೆ ವೈರಸ್ ತಗುಲಿದೆ.
ಸುರೇಂದ್ರ ಶೌರಿ ಅವರು ಅಕ್ಟೋಬರ್ 1 ರಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಅ.2 ರ ಸಂಜೆಯೇ ಇವರ ವರದಿ ಪಾಸಿಟಿವ್ ಬಂದಿದೆ. ಆದರೂ ಕೂಡ ಅ.3 ರಂದು ಸುರಂಗಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರದಿ ಬಂದಿರುವುದು ಸುರೇಂದ್ರ ಶೌರಿ ಅವರ ಗಮನಕ್ಕೆ ಬಂದಿಲ್ಲ ಎಂದು ಹೇಳಲಾಗಿದೆಯಾದರೂ ಪರೀಕ್ಷೆಗೆ ಒಳಪಟ್ಟ ಬಳಿಕ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಶಾಸಕ ತೆಗೆದುಕೊಳ್ಳದೇ, ಸೆಲ್ಫ್ ಐಸೋಲೇಷನ್ಗೆ ಒಳಗಾಗದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗ್ತಿದೆ.
ಸಿಎಂ ಜೈರಾಮ್ ಠಾಕೂರ್ ಮತ್ತು ಸಂಪುಟ ಸಚಿವ ರಾಕೇಶ್ ಪಥಾನಿಯಾ ಅವರು ಸುರೇಂದ್ರ ಶೌರಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಗಣ್ಯರಾಗಿದ್ದಾರೆ ಎಂದು ಹೇಳಲಾಗುತ್ತಿದೆ.