ದಾಮೋಹ್ (ಮಧ್ಯ ಪ್ರದೇಶ): ಅಪ್ರಾಪ್ತ ಬಾಲಕಿಯೊಬ್ಬಳನ್ನ ಅಪಹರಿಸಿ ಅತ್ಯಾಚಾರವೆಸಗಿ ಆಕೆಯ ಕಣ್ಣುಗಳನ್ನು ಕಿತ್ತು ಹಾಕಿದ ಭೀಭತ್ಸ ಘಟನೆ ದಾಮೋಹ್ ಜಿಲ್ಲೆ ಜಬೇರಾ ಬಳಿ ನಡೆದಿದೆ. ಸಂತ್ರಸ್ತ ಬಾಲಕಿಯು ಬುಧವಾರ ಸಂಜೆಯಿಂದ ಕಾಣೆಯಾಗಿದ್ದಳು. ನಂತರ ಮಧ್ಯರಾತ್ರಿ ಹೊಲದಲ್ಲಿನ ಗುಡಿಸಲೊಂದರಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಚಿಕಿತ್ಸೆಗಾಗಿ ಹತ್ತಿರದ ಸಮುದಾಯ ಚಿಕಿತ್ಸಾ ಕೇಂದ್ರಕ್ಕೆ ಬಾಲಕಿಯನ್ನು ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ತೀರಾ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಜಬಲ್ಪುರ್ಗೆ ಕರೆದೊಯ್ಯಲಾಯಿತು.
ಲಭ್ಯ ಮಾಹಿತಿಯ ಪ್ರಕಾರ, ಸಂತ್ರಸ್ತ ಬಾಲಕಿ ಬುಧವಾರ ಸಂಜೆ 5 ಗಂಟೆ ಸುಮಾರಿನಿಂದ ಕಾಣೆಯಾಗಿದ್ದಳು. ರಾತ್ರಿ 12 ರವರೆಗೂ ಸಂಬಂಧಿಕರು ಬಾಲಕಿಯ ಹುಡುಕಾಟದಲ್ಲಿ ತೊಡಗಿದ್ದರು. ಅಷ್ಟೊತ್ತಾದರೂ ಬಾಲಕಿ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ಇದಾಗಿ ಕೆಲ ಹೊತ್ತಿನ ನಂತರ ಬಾಲಕಿಯು ಕೈಕಟ್ಟಿದ ಸ್ಥಿತಿಯಲ್ಲಿ ಹೊಲದಲ್ಲಿದ್ದ ಗುಡಿಸಲಲ್ಲಿ ಪತ್ತೆಯಾಗಿದ್ದಳು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕಣ್ಣು ಕಿತ್ತು ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ನಂತರ ಬಾಲಕಿಯ ಸಂಬಂಧಿಕರು ಹತ್ತಿರದ ಪೊಲೀಸ್ ಠಾಣೆ ಎದುರು ಜಮಾಯಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.