ಇಂಫಾಲ್/ಐಜಾಲ್: ಮಣಿಪುರ ಮತ್ತು ಮಿಜೋರಾಂನಲ್ಲಿ ಭೂಕಂಪನ ಸಂಭವಿಸಿದ್ದು, ಜನರಲ್ಲಿ ಭೀತಿ ಮೂಡಿದೆ. ಕಂಪನದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ಎರಡೂ ಈಶಾನ್ಯ ರಾಜ್ಯಗಳ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಪಶ್ಚಿಮ ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ 11.08ರ ವೇಳೆಗೆ ಭಾರೀ ಭೂಕಂಪನವಾಗಿದೆ. 28 ಕಿ.ಮೀ ಭೂ ಆಳದಲ್ಲಿ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲಾಗಿದೆ. ಕಂಪನದಿಂದ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದರು.
ನಂತರ ತಮೆಂಗ್ಲಾಂಗ್ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ರಾತ್ರಿ 11.39ರ ಸಮಯದಲ್ಲಿ ಲಘು ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.8ರ ತೀವ್ರತೆ ದಾಖಲಾಗಿದೆ. ಇದು ಭೂಮಿಯ 30 ಕಿ.ಮೀ ಆಳದಲ್ಲಿ ಉಂಟಾಗಿದೆ.
ಹಾಗೆಯೆ ನೆರೆಯ ಅಸ್ಸಾಂ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿಯೂ ಭೂಕಂಪನ ಉಂಟಾಗಿದೆ. ಕಳೆದ ಕೆಲ ದಿನಗಳಲ್ಲಿ ಮಣಿಪುರದಲ್ಲಿ ಸಂಭವಿಸಿದ ನಾಲ್ಕನೇ ಭೂಕಂಪ ಇದಾಗಿದೆ.
ಇದಕ್ಕೂ ಮುನ್ನ ಪೂರ್ವ ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ 3.12ಕ್ಕೆ ಭೂಕಂಪಿಸಿತ್ತು. ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದು, 10 ಕಿ.ಮೀ ಆಳದಲ್ಲಿ ಉಂಟಾಗಿತ್ತು. ಶನಿವಾರ ಬೆಳಗ್ಗೆ 6.09ಕ್ಕೆ ರಿಕ್ಟರ್ ಮಾಪಕದಲ್ಲಿ 3.6ರ ತೀವ್ರತೆಯ ಮತ್ತೊಂದು ಭೂಕಂಪನ ಪೂರ್ವ ಮಿಜೋರಾಂನ ಚಂಪೈ ಜಿಲ್ಲೆಯಲ್ಲಿ ಸಂಭವಿಸಿತ್ತು.