ಹೊಸದಿಲ್ಲಿ: ಬೇರೆ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವ ಕೆಲಸಗಾರರನ್ನು ಅವರ ಕಂಪನಿ ಮಾಲೀಕರು ಅಥವಾ ಮನೆ ಮಾಲೀಕರು ಹೊರಹಾಕುವಂತಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಸೂಚನೆ ನೀಡಿದೆ. ವಲಸೆ ಕಾರ್ಮಿಕರು ಈಗ ಎಲ್ಲಿರುವರೋ ಅಲ್ಲಿಯೇ ಇರುವಂತೆ ಸರ್ಕಾರ ಸೂಚಿಸಿದೆ.
ಲಾಕ್ಡೌನ್ ನಂತರ ದೇಶದ ವಿವಿಧ ರಾಜ್ಯಗಳಲ್ಲಿನ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ತವರು ರಾಜ್ಯಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ಸಾಕಷ್ಟು ಕಾರ್ಮಿಕರು ಮರಳಿದ್ದು ಹಾಗೂ ಇನ್ನೂ ಕೆಲವರು ಮರಳುತ್ತಿದ್ದು, ಅವರ ಪ್ರಸ್ತುತ ನಿವಾಸ ಸ್ಥಳದ ಆಧಾರದಲ್ಲಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಹೀಗೆ ತವರು ರಾಜ್ಯಗಳಿಗೆ ಮರಳುತ್ತಿರುವ ಕಾರ್ಮಿಕರು ಗುಂಪಾಗಿ ಸೇರುತ್ತಿರುವ ಬಸ್ ನಿಲ್ದಾಣ ಅಥವಾ ಇನ್ನಾವುದೇ ಸ್ಥಳಗಳಲ್ಲಿ, ಆಯಾ ಜಿಲ್ಲಾಡಳಿತ ನೇಮಿಸಿದ ಜಿಲ್ಲಾ ವಿಚಕ್ಷಣಾಧಿಕಾರಿ ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಯಾವುದೇ ವ್ಯಕ್ತಿಯು ಕೋವಿಡ್-19 ಮಾದರಿಯ ಜ್ವರ ಅಥವಾ ಇನ್ನಾವುದೇ ಲಕ್ಷಣಗಳನ್ನು ಹೊಂದಿದ್ದರೆ ಅಂಥವರನ್ನು ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಗೆ ಸೇರಿಸಿ ಐಸೊಲೇಷನ್ನಲ್ಲಿಡಲಾಗುವುದು ಹಾಗೂ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಲಾಗಿದೆ.