ಹೈದರಾಬಾದ್: ವಿಜ್ಞಾನದ ಭಾಷೆಯಲ್ಲಿ ಬರಿಗಣ್ಣಿಗೆ ಕಾಣಿಸದಷ್ಟು ತುಂಬಾ ಚಿಕ್ಕ ಜೀವಿಗಳನ್ನು ಸೂಕ್ಷ್ಮ ಜೀವಿಗಳೆಂದು ಕರೆಯಲಾಗುತ್ತದೆ. “ಮೈಕ್ರೋ-ಆರ್ಗನಿಸ್ಮ್ಸ್ (ಅಥವಾ) ಮೈಕ್ರೋಬ್ಸ್”(ಸೂಕ್ಷ್ಮಜೀವಿಗಳು) ಎಂದು ಕರೆಯಲ್ಪಡುವ ಅತೀ ಅಗೋಚರ ಜೀವಿಗಳನ್ನು ನಮ್ಮ ಬರಿಗಣ್ಣಿನಿಂದ ನೋಡಲಾಗುವುದಿಲ್ಲ.
ಆದರೆ, ಮೈಕ್ರೋಸ್ಕೋಪ್ ಎಂಬ ವಿಶೇಷ ಉಪಕರಣದ ಮೂಲಕ ಇದು ಗೋಚರಿಸುತ್ತದೆ. ಇವುಗಳು ನಮ್ಮ ನಿತ್ಯ ಜೀವನದಲ್ಲಿ ವಹಿಸುವ ಪಾತ್ರದ ಕುರಿತ ವಿಶೇಷ ವರದಿ ಇಲ್ಲಿದೆ.
ಹಾಗಾದರೆ, ಇವು ಯಾವುವು? ಇವುಗಳ ವಾಸಸ್ಥಳ ಯಾವುದು? ನಮ್ಮ ನಿತ್ಯದ ಜೀವನದಲ್ಲಿ ಅವುಗಳ ಪಾತ್ರವೇನು? ಹೀಗೆಯೇ ಇಂತಹ ಹಲವಾರು ಪ್ರಶ್ನೆಗಳಿಗೆ ಮೈಕ್ರೋಬಯಾಲಜಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ವಿಶಾಲಕ್ಷಿ ಅರಿಜೆಲಾ ಅವರು ಉತ್ತರಿಸಿದ್ದಾರೆ. ಮೊದಲಿಗೆ ಈ ಸೂಕ್ಷ್ಮಜೀವಿಗಳನ್ನು 4 ಗುಂಪುಗಳಾಗಿ ವಿಂಗಡಿಸಿದ್ದಾರೆ.
ಸಾಮಾನ್ಯವಾಗಿ ಈ ಸೂಕ್ಷ್ಮಜೀವಿಗಳು ಸರ್ವವ್ಯಾಪಿಯಾಗಿವೆ. ಅಂದರೆ, ಅವು ಎಲ್ಲೆಡೆಯೂ ವಾಸಿಸುತ್ತವೆ. ಉದಾ: ನೀರು, ಮಣ್ಣು, ನಮ್ಮ ದೇಹದಲ್ಲಿ ಮತ್ತು ಸಸ್ಯಗಳು, ಆಹಾರಗಳು ಮತ್ತು ಮುಂತಾದವುಗಳಲ್ಲಿಯೂ ಇವು ವಾಸಿಸುತ್ತವೆ.
ಪಾಚಿ : ನೀವು ಸಿಹಿನೀರಿನ ಕೊಳ ಅಥವಾ ಸರೋವರವನ್ನು ನೋಡಿದಾಗ, ನೀರಿನ ಮೇಲ್ಮೈಯಲ್ಲಿ ಹಸಿರು ಬಣ್ಣದ ಪದರ ಇರುವುದನ್ನು ಗಮನಿಸಿರಬಹುದು. ಈ ಸಸ್ಯಗಳನ್ನು ಪಾಚಿ ಎಂದು ಕರೆಯಲಾಗುತ್ತದೆ. ಇಲ್ಲಿ ಸೂಕ್ಷ್ಮ ಜೀವಿಗಳು ಸಮೃದ್ದವಾಗಿ ಜೀವಿಸುತ್ತವೆ.
ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯ : ಹಿಂದಿನ ದಿನದ ಮೊಸರಿನೊಂದಿಗೆ ಬಿಸಿ ಮಾಡಿದ ಹಾಲನ್ನು ಸೇರಿಸಿದಾಗ, ಅದು ಕೆಲವೇ ಗಂಟೆಗಳಲ್ಲಿ ಮೊಸರಾಗಿ ಬದಲಾಗುವುದು ನಮಗೆಲ್ಲರಿಗೂ ತಿಳಿದಿದೆ. ಇಲ್ಲಿ ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯವು ಹಾಲನ್ನು ಮೊಸರಿನನ್ನಾಗಿ ಪರಿವರ್ತಿಸುತ್ತದೆ.
ಶಿಲೀಂಧ್ರ: ಕೆಲವು ದಿನಗಳವರೆಗೆ ಗಾಳಿಗೆ ಒಡ್ಡಿಕೊಂಡ ಬ್ರೆಡ್‌ನಲ್ಲಿ ಕಪ್ಪು ಬಣ್ಣದ ಹಾಗೂ ಮೆತ್ತಗಿನ ಬೆಳವಣಿಗೆ ಕಂಡು ಬರುತ್ತದೆ. ಇದಕ್ಕೆ ಕಾರಣ ಶಿಲೀಂಧ್ರ ಎಂದು ವಿಶಾಲಕ್ಷಿ ಅರಿಜೆಲಾ ತಿಳಿಸಿದ್ದಾರೆ.

ಪ್ರೊಟೊಜೋವಾ : ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಕಾಯಿಲೆಗಳಲ್ಲಿ ಒಂದಾದ ಮಲೇರಿಯಾವು ಸೊಳ್ಳೆಯಿಂದ ಹರಡುವ ಪ್ರೊಟೊಜೋವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ನಮ್ಮ ದೇಶೀಯ ಬಳಕೆಯ ತ್ಯಾಜ್ಯ ವಸ್ತುಗಳು, ಸತ್ತ ಸಸ್ಯಗಳು ಮತ್ತು ಪ್ರಾಣಿಗಳು ಸೂಕ್ಷ್ಮಜೀವಿಗಳ ಚಟುವಟಿಕೆಯಿಂದ ಕೊಳೆಯುತ್ತವೆ ಮತ್ತು ಅದು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಹಾಗೆಯೇ, ದೇಶೀಯ ಬಳಕೆಗೆ ಇಂಧನ ಮೂಲವಾಗಿ ಗ್ರಾಮೀಣ ಜನರು ಬಳಸುವ ಗೋಬರ್ ಅನಿಲವನ್ನು ಸೂಕ್ಷ್ಮಜೀವಿಗಳು ಉತ್ಪಾದಿಸುತ್ತವೆ ಎಂದು ತಿಳಿಸಿದ್ದಾರೆ. ಇಂದು ನಮ್ಮ ದೈನಂದಿನ ಜೀವನದಲ್ಲಿ ಸೂಕ್ಷ್ಮ ಜೀವಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ.
ಅವುಗಳ ಉಪಸ್ಥಿತಿ ಮತ್ತು ಕೊಡುಗೆ ನಮಗೆ ಬಹಳ ಅಮೂಲ್ಯವಾದುದು. ಏಕೆಂದರೆ ಅವರ ಒಳಗೊಳ್ಳುವಿಕೆ ವಿಜ್ಞಾನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಂಡುಬರುತ್ತದೆ ಎಂದು ವಿವರಿಸಿದ್ದಾರೆ.
ಸೂಕ್ಷ್ಮಾಣುಜೀವಿಗಳು ನಮಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡಲು ಪ್ರಮುಖ ಪಾತ್ರವಹಿಸುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳು, ಸಸ್ಯಗಳು ಮತ್ತು ಮನುಷ್ಯರಿಗೆ ಕೆಲವು ರೀತಿಯ ಗಂಭೀರ ಕಾಯಿಲೆಗಳನ್ನು ಉಂಟುಮಾಡುವುದರಿಂದ ಅವುಗಳು ಹಾನಿಕಾರಕವಾಗಿಯೂ ಕೆಲಸ ಮಾಡುತ್ತವೆ.
ಹೆಚ್ಚಿನ ಸಂದರ್ಭದಲ್ಲಿ ಇವುಗಳಿಂದ ಸಾಂಕ್ರಾಮಿಕ ರೋಗಗಳು ಸಹ ಉಂಟಾಗುತ್ತವೆ. ಆದರೆ, ಇದೇ ಸೂಕ್ಷ್ಮಜೀವಿಗಳಿಂದ ಲಸಿಕೆಗಳು ಮತ್ತು ಪ್ರತಿಜೀವಕಗಳನ್ನು ಸಹ ಉತ್ಪಾದಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನಮ್ಮ ಕಣ್ಣುಗಳು ಸೂಕ್ಷ್ಮವಾದ ವಸ್ತುವನ್ನು ನೋಡುವ ಸಾಮರ್ಥ್ಯವನ್ನು ಹೊಂದಿದ್ದರೆ, ಈ ಅಸಂಖ್ಯಾತ ಜೀವಿಗಳು ನಮ್ಮ ಸುತ್ತಲೂ ತಿರುಗಾಡುತ್ತಿದ್ದುದ್ದನ್ನು ನಾವು ನೋಡುತ್ತಿದ್ದೆವು, ಮತ್ತು ಅವುಗಳೊಂದಿಗೆ ವಾಸಿಸುವ ಅವಕಾಶ ನಮ್ಮದಾಗುತ್ತಿತ್ತು. ಆದರೂ ಇವು ನಮ್ಮೊಂದಿಗೆ ನಿತ್ಯವೂ ವಾಸಿಸುತ್ತಿರುವುದು ಹಾಗೂ ನಾವು ಇವುಗಳನ್ನು ಅವಲಂಬಿಸಿರುವುದು ಮಾತ್ರ ಸತ್ಯ.