ನವದೆಹಲಿ: ದೆಹಲಿಯ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಮ್ ಆದ್ಮಿ ಪಕ್ಷದ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಪರಿಗಣಿಸಬಾರದು ಎಂದು 'ಮೆಟ್ರೋ ಮ್ಯಾನ್' ಎಂದೇ ಹೆಸರುವಾಸಿಯಾಗಿರುವ ಈ. ಶ್ರೀಧರನ್ ಪತ್ರ ಬರೆದಿದ್ದಾರೆ.
ದೆಹಲಿ ಮೆಟ್ರೋದ ಮುಖ್ಯಸ್ಥರಾಗಿದ್ದ ಶ್ರೀಧರನ್ ಅವರು, ಅದರ ಎಲ್ಲ ಪ್ರಗತಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ನಿರ್ಧಾರವನ್ನು ವಿರೋಧಿಸಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ದೆಹಲಿ ಸರ್ಕಾರದ ಈ ಪ್ರಸ್ತಾವನೆಗೆ ಪ್ರಧಾನಿ ಅಂಕಿತ ಹಾಕಬಾರದು. ಒಂದು ವರ್ಗಕ್ಕೆ ಮಾತ್ರ ಇಂತಹ ಅವಕಾಶ ನೀಡುವುದರಿಂದ ಅದಕ್ಷತೆ ಹಾಗೂ ದಿವಾಳಿತನ ಎದುರಾಗುತ್ತದೆ. ದೆಹಲಿ ಮೆಟ್ರೋ ರೈಲ್ ಕೊಆಪರೇಷನ್ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವ ಇರುವುದರಿಂದ ಒಬ್ಬರೇ ಪಾಲುದಾರರು ಇಂತಹ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದಿದ್ದಾರೆ.
ಮಹಿಳೆಯರಿಗೆ ಮೆಟ್ರೋದಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಿದರೆ ಇತರೆ ರಾಜ್ಯಗಳ ಮೆಟ್ರೋಗಳಲ್ಲಿ ಈ ನೀತಿ ಜಾರಿಯಾಗಬೇಕೆಂಬ ಕೂಗು ಕೇಳಿಬರುತ್ತೆ. ಅಲ್ಲದೆ, ಇತರೆ ವಿದ್ಯಾರ್ಥಿ, ಹಿರಿಯ ನಾಗರಿಕರು ಮತ್ತಿತರ ವರ್ಗಗಳು ಸಹ ಇದೇ ರೀತಿಯ ಬೇಡಿಕೆ ಇಡಬಹುದು. ಇನ್ನು ಆರ್ಥಿಕತೆ ಹಿತದೃಷ್ಟಿಯಿಂದಲೂ ಇದು ಒಳಿತಲ್ಲ. ಮೆಟ್ರೋ ನಷ್ಟ ಅನುಭವಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಒಂದ್ವೇಳೆ ದೆಹಲಿ ಸರ್ಕಾರಕ್ಕೆ ಮಹಿಳೆಯರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ, ಪ್ರಯಾಣಕ್ಕಾಗಿ ಅವರ ಖಾತೆಗಳಿಗೆ ನೇರ ಹಣ ಸಂದಾಯ ಮಾಡಲಿ. ಆದರೆ ಉಚಿತ ಪ್ರಯಾಣ ಬೇಡ ಎಂದು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಮೆಟ್ರೋ ಆರಂಭವಾದಾಗ ಶ್ರೀಧರನ್ ಸಾಕಷ್ಟು ಶ್ರಮ ವಹಿಸಿದ್ದರು. ಯಾವುದೇ ವಿನಾಯ್ತಿ ಇಲ್ಲದೆ, ಎಲ್ಲರೂ ಟಿಕೆಟ್ ಪಡೆದೇ ಪ್ರಯಾಣಿಸಬೇಕೆಂಬುದು ಅವರ ನಿರ್ಧಾರವಾಗಿತ್ತು. ಇದನ್ನು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ವಾಗತಿಸಿದ್ದರು.