ಚೀನಾದ ವುಹಾನ್ನಲ್ಲಿ ಮೊದಲು ಹುಟ್ಟಿಕೊಂಡ ಮಾರಣಾಂತಿಕ ಕೊರೊನಾ ವೈರಸ್ ಇದೀಗ ಜಗತ್ತಿನಾದ್ಯಂತ ವ್ಯಾಪಿಸಿದ್ದು, ಚೀನಾದ ನಂತರ ಅತಿಹೆಚ್ಚು ಸಾವುಗಳು ಇಟಲಿಯಲ್ಲಿ ವರದಿಯಾಗಿದೆ. ಕೋವಿಡ್-19ಗೆ ಇಟಲಿಯಲ್ಲಿ 600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸುಮಾರು 10,000 ಪ್ರಕರಣಗಳು ದೃಢಪಟ್ಟಿದೆ.
ಇಟಲಿಯ ರಾಯಭಾರಿ ವಿನ್ಸೆಂಜೊ ಡಿ ಲುಕಾ ಅವರು ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಇ-ಮೇಲ್ ಮೂಲಕ ನೀಡಿರುವ ಸಂದರ್ಶನದ ಪ್ರಶ್ನೆಗಳಿಗೆ ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಸವಾಲಾಗಿದ್ದು, ಇದನ್ನು ಎದುರಿಸಲು ಇಟಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. 62 ಮಿಲಿಯನ್ ಜನಸಂಖ್ಯೆ ಹೊಂದಿರುವ ಇಟಲಿ ದೇಶವು ಪ್ರಪಂಚದಲ್ಲೇ ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿದ್ದು, ನಮ್ಮ ಪ್ರಯೋಗಾಲಯಗಳು ಮತ್ತು ಚಿಕಿತ್ಸಾಲಯಗಳು ಸಾಂಕ್ರಾಮಿಕ ರೋಗವನ್ನೆದುರಿಸಲು ಅಹರ್ನಿಶಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಇಟಲಿ, ಚೀನಾ, ಕೊರಿಯಾ, ಫ್ರಾನ್ಸ್, ಸ್ಪೇನ್ ಸೇರಿದಂತೆ ಕೊರೊನಾ ಪೀಡಿತ ಒಟ್ಟು 15 ರಾಷ್ಟ್ರಗಳಿಗೆ ಅಧಿಕೃತ, ರಾಜತಾಂತ್ರಿಕ, ವಿಶ್ವಸಂಸ್ಥೆ / ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ 'ಅಗತ್ಯ ಪ್ರಯಾಣ' ಹೊರತುಪಡಿಸಿ ಉಳಿದಂತೆ ಏಪ್ರಿಲ್ 15ರ ವರೆಗೆ ಎಲ್ಲಾ ವೀಸಾಗಳನ್ನು ಭಾರತ ರದ್ದು ಮಾಡಿದೆ. ಅಲ್ಲದೇ ಮಾರ್ಚ್ 15 ರಿಂದ 23 ರವರೆಗೆ ರೋಮ್ ಮತ್ತು ಮಿಲನ್‌ಗೆ ತನ್ನ ಎಲ್ಲಾ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಏರ್ ಇಂಡಿಯಾ ಪ್ರಕಟಿಸಿದೆ ಎಂದು ಒತ್ತಿ ಹೇಳಿದ್ದಾರೆ.
ಇಟಲಿಯಲ್ಲಿ ಸದ್ಯದ ಪರಿಸ್ಥಿತಿ ಏನು?
ವಿನ್ಸೆಂಜೊ ಡಿ ಲುಕಾ: ಇಟಲಿ ಸರ್ಕಾರವು ಸೋಂಕಿನ ಸಂಖ್ಯೆಯ ಬಗ್ಗೆ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ನಿರಂತರ ಮಾಹಿತಿ ನೀಡುತ್ತಿದೆ. ಈವರೆಗೆ ಪ್ರಕರಣದ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಆದರೆ ಮುಂಜಾಗೃತ ಕ್ರಮಗಳನ್ನು ಅಳವಡಿಸಿಕೊಂಡ ಕೆಲವು ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿರುವುದು ಕಂಡುಬಂದಿದೆ. ಇದೀಗ ಈ ಕ್ರಮಗಳನ್ನು ದೇಶದಾದ್ಯಂತ ವಿಸ್ತರಿಸಲಾಗಿದೆ. ಈ ಕ್ರಮಗಳು ಶೀಘ್ರದಲ್ಲೇ ಅದರ ಫಲಿತಾಂಶವನ್ನು ನೀಡಲಿದೆ ಎಂಬ ವಿಶ್ವಾಸ ನಮಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುರೋಪಿಯನ್ ಒಕ್ಕೂಟದ ಸೂಚನೆಯಂತೆ ಇಟಲಿ ಸರ್ಕಾರವು ಪ್ರತಿಕ್ರಿಯಿಸುತ್ತಿದೆ.
ಪ್ರಸ್ತುತ ಇಟಲಿಯಲ್ಲಿ ಅಗತ್ಯವಿರುವಷ್ಟು ಪರೀಕ್ಷಾ ಹಾಗೂ ಚಿಕಿತ್ಸಾ ಕೇಂದ್ರಗಳಿವೆಯೇ?
ಪ್ರಪಂಚದಲ್ಲೇ ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯನ್ನು ಇಟಲಿ ಹೊಂದಿದ್ದು, ನಮ್ಮ ಪ್ರಯೋಗಾಲಯಗಳು ಮತ್ತು ಚಿಕಿತ್ಸಾಲಯಗಳು ಕೊವಿಡ್-19 ಅನ್ನುದ ಎದುರಿಸಲು ಹಗಲು-ರಾತ್ರಿ ಕೆಲಸ ಮಾಡುತ್ತಿವೆ. ಕಳೆದ ವರ್ಷ ಬ್ಲೂಮ್‌ಬರ್ಗ್ ಗ್ಲೋಬಲ್ ಹೆಲ್ತ್ ಇಂಡೆಕ್ಸ್ ಇಟಲಿಗೆ ಎರಡನೇ ಸ್ಥಾನ ನೀಡಿದೆ. ಇಟಲಿ ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿರುವ ಎರಡನೇ ದೇಶವಾಗಿದೆ (83.4 ವರ್ಷಗಳು). ಹಾಗೂ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.
ಇಟಲಿಯ ಆರ್ಥಿಕತೆ ಮೇಲೆ ಕೊರೊನಾ ವೈರಸ್ ಬೀರುವ ಪ್ರಭಾವವನ್ನು ಎದುರಿಸುವ ಸ್ಥಿತಿಯಲ್ಲಿದ್ದೀರಾ?
ಇಟಲಿಯ ಆರ್ಥಿಕತೆಯ ಮೇಲೆ ಕೊರೊನಾ ವೈರಸ್‌ನ ಪ್ರಭಾವದ ಕುರಿತು ಇಟಲಿ ಸರ್ಕಾರ ಎಚ್ಚರಿಕೆಯಿಂದ ಇದ್ದು, ತುರ್ತು ಪರಿಸ್ಥಿತಿ ಸಂದರ್ಭಕ್ಕಾಗಿಯೇ 25 ಬಿಲಿಯನ್ ಯುರೋಗಳನ್ನು ಮೀಸಲಿಟ್ಟಿದೆ.
ಕೊರೊನಾ ವೈರಸ್ ವಿರುದ್ಧ ಜಾಗತಿಕ ಆರ್ಥಿಕತೆಯು ಎದುರಿಸಬೇಕಾದ ಸವಾಲುಗಳು ಯಾವುವು?
ಕೊವಿಡ್-19 ಅನುಭವವು ಆರೋಗ್ಯವೇ ಜಾಗತಿಕ ಸಾರ್ವಜನಿಕ ಹಿತದೃಷ್ಟಿ ಎಂಬುದನ್ನು ತಿಳಿಸಿದೆ. ಈ ಜಾಗತಿಕ ಸಮಸ್ಯೆಯನ್ನು ನಿಭಾಯಿಸಲು ಅಂತರರಾಷ್ಟ್ರೀಯ ಒಗ್ಗಟ್ಟು, ಸಹಕಾರ ಬಿಟ್ಟು ಪರ್ಯಾಯ ಮಾರ್ಗಗಳಿಲ್ಲ. ಇಟಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಪರಿಣಾಮಕಾರಿಯಾಗಿ ಹೋರಾಡಲಿದೆ.
ಕೊನೆಯದಾಗಿ ಇಟಲಿ ರಾಯಭಾರ ಕಚೇರಿಯು ಭಾರತೀಯ ಅಧಿಕಾರಿಗಳೊಂದಿಗೆ, ವಿಶೇಷವಾಗಿ ವಿದೇಶಾಂಗ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರವಾಸೋದ್ಯಮ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದೆ. ಸಕಾಲದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು ಎಂದು ವಿನ್ಸೆಂಜೊ ಡಿ ಲುಕಾ ತಿಳಿಸಿದ್ದಾರೆ.