ಮಂದಾಸೂರ್ (ಮಧ್ಯಪ್ರದೇಶ): ಜಿಲ್ಲೆಯಲ್ಲಿ ದಲಿತ ವರನ ಮದುವೆ ಮೆರವಣಿಗೆಗೆ ಅಡ್ಡಿಪಡಿಸಿದ ಆರೋಪದಡಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಗುರಾಡಿಯಾ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಬಳಿಕ ಪೊಲೀಸ್ ಭದ್ರತೆಯಲ್ಲಿ ಮದುವೆ ಮೆರವಣಿಗೆ ನಡೆಸಲಾಗಿದೆ. ಮೆರವಣಿಗೆ ಮದುವೆ ಸಮಾರಂಭದ ಸ್ಥಳದತ್ತ ಸಾಗುತ್ತಿರುವಾಗ ಕೆಲವರು ದಾರಿ ಮಧ್ಯೆ ತಡೆದು ನಿಲ್ಲಿಸಿ, ಜಾತಿ ನಿಂದನೆ, ಹಲ್ಲೆ ಮಾಡಿದ್ದಾರೆ ಎಂದು ವರನ ಕುಟುಂಬ ನೀಡಿದ ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಸೋಮವಾರ 8 ಜನರನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಚೌಧರಿ ತಿಳಿಸಿದ್ದಾರೆ.