ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಈ ಬಾರಿ ಗೆದ್ದರೆ ಮಮತಾ ಹ್ಯಾಟ್ರಿಕ್ ಬಾರಿಸಿದಂತಾಗಲಿದೆ. ಆದರೆ ಈ ಬಾರಿ ಸರಳ ಬಹುಮತ ಬರಲಿದ್ದು, ಸ್ಥಾನಗಳಲ್ಲಿ ಭಾರಿ ಬದಲಾವಣೆ ಆಗಲಿದೆ.
ಇನ್ನೊಂದೆಡೆ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ. ಅಧಿಕಾರಕ್ಕಾಗಿ ಮಮತಾ ಸಾಕಷ್ಟು ಬೆವರು ಹರಿಸಬೇಕಾಗಲಿದೆ ಎಂದು ಐಎಎನ್ಎಸ್ಸಿ ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.
ಇದೇ ಸಮೀಕ್ಷೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಅಣ್ಣಾ ಡಿಎಂಕೆಯನ್ನು ಸೋಲಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ. ಅಸ್ಸೋಂನಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ನೇತೃತ್ವದ ಆಡಳಿತಾರೂಢ ಬಿಜೆಪಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಸಾಧ್ಯತೆ ಇದೆ. ಇನ್ನು ಕೇರಳದಲ್ಲಿ ಎಲ್ಡಿಎಫ್ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬರಲು ಸಜ್ಜಾಗಿದ್ದರೆ, ಪುದುಚೇರಿಯಲ್ಲಿ ಎಐಎಡಿಎಂಕೆ ಪ್ರಯಾಸ ಪಟ್ಟು ಅಧಿಕಾರ ಹಿಡಿಯಬಹುದು ಎಂದು ಪ್ರೆಡಿಕ್ಟ್ ಮಾಡಲಾಗಿದೆ.
126 ಸ್ಥಾನಗಳ ಅಸ್ಸೋಂ ವಿಧಾನಸಭೆಯಲ್ಲಿ ಇತ್ತೀಚಿನ ಸಮೀಕ್ಷೆಗಳ ಪ್ರಕಾರ 77 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದು ಕಳೆದ ಬಾರಿಗಿಂತ 9 ಸ್ಥಾನ ಕಡಿಮೆ ಪಡೆಯಲಿದೆ ಎಂದು ಹೇಳಲಾಗಿದೆ.
ಇನ್ನೊಂದೆಡೆ ಯುಪಿಎ 26 ಸ್ಥಾನಗಳಿಂದ 40 ಸ್ಥಾನಗಳಿಗೆ ಜಿಗಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಭವಿಷ್ಯ ನುಡಿಯಲಾಗಿದೆ. ಇದೇ ವರ್ಷ ನಡೆಯುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಲಾಗಿದ್ದು, ಕಳೆದ ಬಾರಿಗಿಂತ ಆರು ಸ್ಥಾನಗಳನ್ನ ಕಡಿಮೆ ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆಯಂತೆ.
ಇದನ್ನೂ ಓದಿ:ಗಣರಾಜ್ಯೋತ್ಸವದ ಮೆರವಣಿಗೆ ಸಂದರ್ಭ ಹಾರಾಟ ನಡೆಸಲಿವೆ 42 ವಿಮಾನಗಳು
2016 ರಲ್ಲಿ ಎಲ್ಡಿಎಫ್ 91 ಸ್ಥಾನ ಗಳಿಸಿತ್ತು. ದೇಶದ ಗಮನ ಸೆಳೆದಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭಾರಿ ಹಿನ್ನಡೆ ಅನುಭವಿಸಿದರೂ ಸರಳ ಬಹುಮತದೊಂದಿಗೆ ಅಧಿಕಾರದಲ್ಲಿ ಮುಂದುವರೆಯಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. 294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ, ತೃಣಮೂಲ ಕಾಂಗ್ರೆಸ್ 2016 ರಲ್ಲಿ 211 ಸ್ಥಾನಗಳನ್ನ ಪಡೆದುಕೊಂಡಿತ್ತು. ಈ ಬಾರಿ 53 ಸ್ಥಾನಗಳನ್ನ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿದ್ದು, ಬಿಜೆಪಿ 3 ಸ್ಥಾನಗಳಿಂದ ತನ್ನ ಬಲವನ್ನ 102ಕ್ಕೆ ಹೆಚ್ಚಿಸಿಕೊಳ್ಳಲಿದೆ.
ತಮಿಳುನಾಡಿನಲ್ಲಿ, ಡಿಎಂಕೆ-ಕಾಂಗ್ರೆಸ್ ಮೈತ್ರಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷೆಗಳಲ್ಲಿ ತಿಳಿದು ಬಂದಿದೆ. 162 ಸ್ಥಾನಗಳನ್ನ ಪಡೆಯುವ ಮೂಲಕ ಡಿಎಂಕೆ ಮೈತ್ರಿಕೂಟ ಅಧಿಕಾರ ಹಿಡಿಯಲಿದೆಯಂತೆ. ಮುಖ್ಯಮಂತ್ರಿ ಇ.ಪಳನಿಸ್ವಾಮಿ ನೇತೃತ್ವದ ಆಡಳಿತಾರೂಢ AIADMK ಮೈತ್ರಿಕೂಟವು ಹಿಂದಿನ ಚುನಾವಣೆಗಳಲ್ಲಿ ಪಡೆದ 132 ಸ್ಥಾನಗಳಲ್ಲಿ 72 ಸ್ಥಾನ ಕಳೆದುಕೊಂಡು ಈ ಬಾರಿ ಕೇವಲ 64 ಸ್ಥಾನಗಳಿಗೆ ತೃಪ್ತಿ ಪಡಲಿದೆ ಎಂದು ಅಂದಾಜಿಸಲಾಗಿದೆ.