ಮುಂಬೈ: ಕೊರೊನಾ ಲಾಕ್ಡೌನ್ನಿಂದ ಉಂಟಾದ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಒಂದು ವರ್ಷದವರೆಗೆ ರಾಜ್ಯದ ಎಲ್ಲಾ ಶಾಸಕರ ಶೇ. 30 ರಷ್ಟು ವೇತನ ಕಡಿತದ ಪ್ರಸ್ತಾಪಕ್ಕೆ ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಬಗ್ಗೆ ಸಂಪುಟ ಸಭೆಯ ಬಳಿಕ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ. ರಾಜ್ಯದ ಶಾಸಕರ ವೇತನ ಕಡಿತವು ಈ ತಿಂಗಳಿನಿಂದಲೇ ಪ್ರಾರಂಭವಾಗಲಿದ್ದು, ಒಂದು ವರ್ಷದವರೆಗೆ ಇರುತ್ತದೆ ಎಂದು ಇಂದು ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಪವಾರ್ ಹೇಳಿದರು.
ಸಭೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.
ಲಾಕ್ ಡೌನ್ ಅವಧಿ ಮುಗಿದ ನಂತರ ರಾಜ್ಯದ ಆರ್ಥಿಕತೆಯ ಮೌಲ್ಯಮಾಪನ ಮಾಡಿ ಪುನರುಜ್ಜೀವನ ಯೋಜನೆಯನ್ನು ರೂಪಿಸಲು ಎರಡು ಸಮಿತಿಗಳನ್ನು ಮಹಾರಾಷ್ಟ್ರ ಸಂಪುಟ ಅಂಗೀಕರಿಸಿದೆ.