ಥಾಣೆ(ಮಹಾರಾಷ್ಟ್ರ): 35 ವರ್ಷದ ಉದ್ಯೋಗಿವೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ತಮ್ಮ ಫೇಸ್ಬುಕ್ ಖಾತೆಯಲ್ಲಿ ಲೈವ್ಗೆ ಬಂದು ಸ್ನೇಹಿತರು ಹಾಗೂ ಸಂಬಂಧಿಕರಿಗೆ ತನ್ನ ಜೀವನವನ್ನು ಕೊನೆಗಾಣಿಸಿಕೊಳ್ಳುವ ಬಗ್ಗೆ ತಿಳಿಸಿದ್ದರು.
ಮಂದಾರ್ ಭೋಯಿರ್ ಆತ್ಮಹತ್ಯೆಗೆ ಶರಣಾದವರು. ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಸೋಮವಾರ ಚರೈ ಪ್ರದೇಶದ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ನೌಪಾಡಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದರು. ಜೊತೆಗೆ ಮಗನನ್ನು ಕೂಡ ಜೊತೆಗೆ ಕರೆದೊಯ್ದಿದ್ದರು. ಈ ಹಿನ್ನೆಲೆ ಮಾನಸಿಕವಾಗಿ ನೊಂದಿದ್ದ ಮಂದಾರ್ ಕೆಲಸಕ್ಕೂ ಹೋಗದೆ ಮನೆಯಲ್ಲಿ ಒಬ್ಬರೇ ಇರುತ್ತಿದ್ದರಂತೆ. ಖಿನ್ನತೆಗೆ ಒಳಗಾಗಿದ್ದಲ್ಲದೆ ಸಾಲ ಮಾಡಿಕೊಂಡ ನೋವಿನಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರದ್ಧಾಂಜಲಿ ಪೋಸ್ಟ್:
ಸಾಯುವ ಮುನ್ನ ತಾವೇ ಸ್ವತಃ ತಮ್ಮ ಶ್ರದ್ಧಾಂಜಲಿ ಪೋಸ್ಟರ್ ರಚಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಸ್ನೇಹಿತರು ಭೋಯಿರ್ಗೆ ಸಮಾಧಾನ ಪಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಸೋಮವಾರ ಫೇಸ್ಬುಕ್ ಲೈವ್ಗೆ ಬಂದು ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳುವ ಬಗ್ಗೆ ಹೇಳಿಕೊಂಡಿದ್ದರಂತೆ.
ಇದಾದ ಕೆಲ ಸಮಯಕ್ಕೆ ಸ್ನೇಹಿತರು ಭೋಯಿರ್ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಭೋಯಿರ್ ಮನೆಗೆ ತೆರಳಿ ನೋಡಿದಾಗ ಅವರು ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ಅಲ್ಲದೆ, ಮನೆಯಲ್ಲಿ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎನ್ನಲಾಗ್ತಿದೆ.