ನೀಮುಚ್ (ಮಧ್ಯಪ್ರದೇಶ): ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಮನೆಗೆ ಮರಳಿ ಬಂದ ಯೋಧನಿಗೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜಿರಾನ್ ಗ್ರಾಮದ ಜನರು ಭರ್ಜರಿ ಸ್ವಾಗತ ನೀಡಿದ್ದಾರೆ.
ಬೆಂಗಳೂರಿನಲ್ಲಿ ತರಬೇತಿ ಪಡೆದು 2004ರಲ್ಲಿ ನಾಯಕ್ ವಿಜಯ್ ಬಿ ಸಿಂಗ್ ಅವರು ಸೇನೆ ಸೇರ್ಪಡೆಯಾಗಿದ್ದರು. ಇವರು ಜಮ್ಮು ಮತ್ತು ಕಾಶ್ಮೀರ, ಲಡಾಖ್ನ ಲೇಹ್ ಮತ್ತು ಕಾರ್ಗಿಲ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ರಜೌರಿಯಲ್ಲಿ ಬಿಎಸ್ಎಫ್ನ ಇಬ್ಬರು ಕಾನ್ಸ್ಟೇಬಲ್ಗಳು ನಾಪತ್ತೆ
ಜಿರಾನ್ ಗ್ರಾಮಕ್ಕೆ ಹಿಂದಿರುಗಿದ ಸಿಂಗ್ರನ್ನು ಅವರ ಪಾದ ಕೂಡ ನೆಲದ ಮೇಲೆ ತಾಗದಂತೆ, ತಮ್ಮ ಅಂಗೈಗಳನ್ನೇ ಹಾಸಿಗೆ ಮಾಡಿ ಗ್ರಾಮಸ್ಥರು ಬರಮಾಡಿಕೊಂಡಿದ್ದಾರೆ. ಪ್ರಸ್ತುತ ಜಿರಾನ್ ಗ್ರಾಮದ 60 ಜನರು ಸೇನೆಯಲ್ಲಿದ್ದಾರೆ.
ಗ್ರಾಮದಲ್ಲಿ 'ಸೈನಿಕ ಪಾಠಶಾಲೆ'ಯನ್ನು ಪ್ರಾರಂಭಿಸಿರುವ ವಿಜಯ್ ಸಿಂಗ್, ಭಾರತೀಯ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆಗೆ ಸೇರಲು ಬಯಸುವ ಜಿರಾನ್ ಯುವಕರಿಗೆ ತರಬೇತಿ ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.