ಉತ್ತರ ಪ್ರದೇಶ/ ಹರ್ದೋಯಿ: ನಿಜಾಮುದ್ದೀನ್ ಮಾರ್ಕಜ್‌ನಿಂದ ಹಿಂದಿರುಗಿದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ ಕಾರಣ ಉತ್ತರ ಪ್ರದೇಶದ ಹರ್ದೋಯಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿದ್ದ 22 ಜನರ ಪೈಕಿ ಒಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಐವತ್ತು ವರ್ಷ ಪ್ರಾಯದ ಮದರಸಾ ಶಿಕ್ಷಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ರೋಗಿಯು ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯ ನಿವಾಸಿಯಾಗಿದ್ದಾರೆ. ಸದ್ಯ ಇವರನ್ನು ಸೀತಾಪುರದ ಖೈರಾಬಾದ್‌ನ ಐಸೋಲೇಶನ್ಗೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಜನರಿಗಾಗಿ ಜಿಲ್ಲಾಡಳಿತ ಈಗಾಗಲೇ ಶೋಧ ಆರಂಭಿಸಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನೂ ಕಲೆ ಹಾಕಲಾಗ್ತಿದೆ. ಮದರಸಾ ಸುತ್ತಮುತ್ತ ಈಗಾಗಲೇ ಸ್ಯಾನಿಟೈಸರ್ ಹಾಗೂ ರಾಸಾಯನಿಕ ಸಿಂಪಡಿಸಿ ಸ್ವಚ್ಛಗೊಳಿಸಲಾಗ್ತಿದ ಎಂದು ಜಿಲ್ಲಾಡಳಿತ ತಿಳಿಸಿದೆ.
ದೆಹಲಿಯ ನಿಜಾಮುದ್ದೀನ್ ಮಾರ್ಕಾಜ್‌ಗೆ ತೆರಳಿ ವಾಪಸ್ ಆಗಿದ್ದ ಓರ್ವ ವ್ಯಕ್ತಿ ಹಾರ್ದೋಯಿ ಜಿಲ್ಲೆಯ ಬಿಲ್ ಗ್ರಾಮದಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ. ಮಾರ್ಚ್ 21 ರಿಂದ 27 ರವರೆಗೆ ಮದರಸಾ ಮತ್ತು ಮಸೀದಿ ಸುತ್ತಮುತ್ತ ಸಂಚಾರ ನಡೆಸಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಈತನ ಸಂಪರ್ಕಕ್ಕೆ ಬಂದಿದ್ದವರೆಲ್ಲರನ್ನೂ ಐಸೋಲೇಶನ್ನಲ್ಲಿಡಲಾಗಿತ್ತು. ಇದು ಹರ್ದೋಯಿ ಜಿಲ್ಲೆಯಲ್ಲಿ ಪತ್ತೆಯಾದ 2ನೇ ಕೊರೊನಾ ಪ್ರಕರಣವಾಗಿದ್ದು, ಈ ಮೊದಲು 30 ವರ್ಷದ ಯುವಕನಿಗೆ ಕೊರೊನಾ ಬಾಧಿಸಿತ್ತು.