ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಮಂದುವರಿಸುವ ಬಗ್ಗೆ ಪ್ರಧಾನಿ ಮೋದಿ ನಿನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರಿಂದ ಮೇ 3 ರವರೆಗೆ ಕಾಯ್ದಿರಿಸಿದ್ದ ಎಲ್ಲಾ ರೈಲ್ವೆ ಟಿಕೆಟ್‌ಗಳನ್ನು ರದ್ದುಪಡಿಸಲಾಗುತ್ತದೆ.
ಲಾಕ್‌ಡೌನ್ ವಿಸ್ತರಣೆಯಿಂದ ಪ್ರಯಾಣಿಕರ ರೈಲುಗಳನ್ನು ಅಮಾನತುಗೊಳಿಸಿದ್ದು, ಏಪ್ರಿಲ್ 15 ರಿಂದ ಮೇ 3 ರವರೆಗೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ ಸುಮಾರು 39 ಲಕ್ಷ ಟಿಕೆಟ್‌ಗಳನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಗೊಳಿಸಲು ಸಜ್ಜಾಗಿದೆ. ಮೇ 3 ರವರೆಗೆ ರದ್ದಾದ ರೈಲುಗಳಿಗೆ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೌಂಟರ್‌ಗಳಲ್ಲಿ ಬುಕ್ ಮಾಡಿದವರು ಜುಲೈ 31 ರವರೆಗೆ ಮರುಪಾವತಿ ಪಡೆದುಕೊಳ್ಳಬಹುದು.
ಲಾಕ್‌ಡೌನ್ ಸಮಯದಲ್ಲಿ ರೈಲ್ವೆ ಟಿಕೆಟ್ ಕಾಯ್ದಿರಿಸಲು ಅನುಮತಿ ನೀಡಿದ್ದರಿಂದ, ರೈಲುಗಳು ಲಾಕ್‌ಡೌನ್ ನಂತರದ ಕಾರ್ಯಾಚರಣೆ ನಡೆಸಲಿವೆ ಎಂದು ನಂಬಿದ್ದ ಪ್ರಯಾಣಿಕರಿಂದ ಸುಮಾರು 39 ಲಕ್ಷ ಟಿಕೆಟ್‌ಗಳು ಬುಕಿಂಗ್ ಆಗಿದ್ದವು ಎಂದು ಮೂಲಗಳು ತಿಳಿಸಿವೆ.
ಮೇ 3ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ(ಕಾಯ್ದಿರಿಸಿದ ಮತ್ತು ಕಾಯ್ದಿರಿಸದ) ಟಿಕೆಟ್ ಕೌಂಟರ್ಗಳು ಮುಚ್ಚಲ್ಪಡುತ್ತವೆ. ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ರೈಲು ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ್ದು, ಆನ್‌ಲೈನ್ ರದ್ದತಿ ಸೌಲಭ್ಯವು ಹಾಗೆ ಇರಲಿದೆ.