ಭುವನೇಶ್ವರ: ಲಾಕ್ಡೌನ್ ವೇಳೆ ಹೆಚ್ಚುವರಿ ಹಣ ಸಂಗ್ರಹಣೆಗಾಗಿ ಮದ್ಯದ ಮೇಲೆ ವಿಧಿಸಿರುವ ವಿಶೇಷ ಕೋವಿಡ್-19 ತೆರಿಗೆ ಶುಲ್ಕವನ್ನು ಶೇ. 50 ರಿಂದ ಸಮಂಜಸವಾದ ದರಕ್ಕೆ ಇಳಿಸಬೇಕೆಂದು ಒಡಿಶಾ ಸರ್ಕಾರದ ಮೇಲೆ ಮದ್ಯ ತಯಾರಕರು ಒತ್ತಡ ಹೇರಿದ್ದಾರೆ.
ರಾಜ್ಯ ಸರ್ಕಾರದ ಬೊಕ್ಕಸಕ್ಕಾಗುತ್ತಿರುವ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಪ್ರಾತಿನಿಧ್ಯದಲ್ಲಿ ಈ ಹಿಂದೆ ಮದ್ಯದ ಮೇಲಿನ ವಿಶೇಷ ಕೊರೊನಾ ಶುಲ್ಕವನ್ನು ವಿಧಿಸಲಾಗಿದೆ. ಇದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತವಾಗಿದೆ ಎಂದು ಭಾರತೀಯ ಅ್ಕೊಹಾಲಿಕ್ ಬೆವರೇಜ್ ಕಂಪನಿಗಳ ಒಕ್ಕೂಟ ಹೇಳಿದೆ.
ಅಲ್ಲದೆ ರಾಜ್ಯದ ತೆರಿಗೆ ಸಂಗ್ರಹದಲ್ಲಿಯೂ ಸಹ ಇಳಿಕೆಯಾಗಿದೆ. ಇದು ರಾಜ್ಯದ ಬೊಕ್ಕಸಕ್ಕಾಗುತ್ತಿರುವ ನಷ್ಟ. ಮದ್ಯದ ಮೇಲೆ ವಿಧಿಸಿರುವ ವಿಶೇಷ ಕೋವಿಡ್-19 ತೆರಿಗೆಯನ್ನು ಶೇ. 50 ಪ್ರತಿಶತದಿಂದ ಸಮಂಜಸವಾದ ದರಕ್ಕೆ ತರುವುದರಿಂದ ಮದ್ಯ ಮಾರಾಟದ ಏರಿಕೆಯ ಜೊತೆಗೆ ತೆರಿಗೆ ಸಂಗ್ರಹವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮದ್ಯ ತಯಾರಕರು ಒಡಿಶಾ ಸಿಎಂ ಮೇಲೆ ಒತ್ತಡ ತಂದಿದ್ದಾರೆ.
ವ್ಯಾಪಾರಿಗಳು, ಸಮಾಜ, ಸಾಮೂಹಿಕ ಹಿತಾಸಕ್ತಿ, ಸಣ್ಣ-ಪುಟ್ಟ ಗ್ರಾಹಕರು ಸೇರಿದಂತೆ ಇತರ ಪ್ರಮುಖರೆಲ್ಲರನ್ನು ಗಮನದಲ್ಲಿಕೊಂಡು ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿರುವ ಸಿಐಎಬಿಸಿ ಮಹಾನಿರ್ದೇಶಕ ವಿನೋದ್ ಗಿರಿ, ರಾಜ್ಯದ ಚಿಲ್ಲರೆ ವ್ಯಾಪಾರಿಗಳಿಗೆ ಮದ್ಯ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ತಂತ್ರಜ್ಞಾನದ ಪರಿಚಯವಿಲ್ಲದ ಕಾರಣ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆನ್ಲೈನ್ನಲ್ಲಿ ಮದ್ಯ ಖರೀದಿಸುವುದನ್ನು ಬಿಟ್ಟಿದ್ದಾರೆ ಎಂದು ತಿಳಿಸಿರುವ ಅವರು, ಮೇ ತಿಂಗಳಲ್ಲಿ ಮದ್ಯ ಮಾರಾಟವು ಶೇ. 87 ರಷ್ಟು ಕುಸಿದಿದೆ ಎಂದಿದ್ದಾರೆ.