ಹೈದರಾಬಾದ್: ತಿಂಗಳುಗಳ ಕಾಲ ಮನೆಗಳ ಒಳಗೇ ಉಳಿದ ಜನ ಲಾಕ್‌ಡೌನ್‌ನಿಂದ ಬಸವಳಿದಿದ್ದಾರೆ. ಯಾವುದೇ ಆರ್ಥಿಕ ಚಟುವಟಿಕೆ ಉದ್ದೇಶದಿಂದ ಜನ ಮತ್ತೆ ರಸ್ತೆಗೆ ಇಳಿದರೆ, ವೈರಸ್ ಮರಳಿ ದಾಳಿ ಮಾಡುವ ಸಾಧ್ಯತೆಗಳು ಇವೆ. ಮನೆಯಲ್ಲಿಯೇ ಇರಲಿ, ಹೊರಗಡೆಯೇ ಇರಲಿ, ಯಾವಾಗ ಬೇಕಾದರೂ ವೈರಸ್ ಹರಡುವ ಭೀತಿ ಜನರನ್ನು ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ನ್ಯೂಜಿಲೆಂಡ್ ಸರ್ಕಾರ ತನ್ನ ನಾಗರಿಕರಿಗಾಗಿ 'ಸಾಮಾಜಿಕ ಬಬಲ್'’ ಮತ್ತು 'ಟ್ರಾವೆಲ್ ಬಬಲ್' ವಿಧಾನವನ್ನು ಪರಿಚಯಿಸಿದೆ.
ಈ ‘ಸಾಮಾಜಿಕ ಬಬಲ್’ ಎಂದರೇನು?
ಸಾಮಾಜಿಕ ಬಬಲ್ ಎಂದರೆ ಜನರು ಪರಸ್ಪರ ದೈಹಿಕವಾಗಿ ಭೇಟಿ ಆಗುವುದನ್ನು ನಿಯಂತ್ರಿಸುವ ಪ್ರಕ್ರಿಯೆ. ಇದು ಕ್ಲಸ್ಟರ್ ರೀತಿ ಇರಲಿದೆ. ಜನರು ತಮ್ಮ ಆಯ್ಕೆಯ ಕುಟುಂಬಗಳು / ಸ್ನೇಹಿತರನ್ನು ಮಾತ್ರ ಭೇಟಿಯಾಗಲು ಅವಕಾಶ ನೀಡುವುದು ಇದರ ಮುಖ್ಯ ಉದ್ದೇಶ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕರು, “ ನಾವು ಕಡಿಮೆ ಜನರೊಂದಿಗೆ ದೈಹಿಕ ಸಂಪರ್ಕ ಹೊಂದಿದಾಗ ವೈರಸ್ ಹರಡುವುದನ್ನು ತಡೆಯುವ ಸಾಧ್ಯತೆ ಇದೆ ” ಎಂದು ಹೇಳುತ್ತಾರೆ. ಈ ಕಾರ್ಯವಿಧಾನ ಜಾರಿಯಲ್ಲಿ ಇದ್ದಾಗ, ವೈರಸ್ ಸೋಂಕಿತ ವ್ಯಕ್ತಿಯ ಸಂಪರ್ಕ ಪತ್ತೆ ಮಾಡುವುದು ಅಧಿಕಾರಿಗಳಿಗೆ ಸುಲಭ ಆಗುತ್ತದೆ.
ಇದನ್ನು ಎಲ್ಲಿ ಕಾರ್ಯಗತ ಮಾಡಲಾಗುತ್ತಿದೆ?
ಲಾಕ್‌ಡೌನ್ ನಿಯಮಗಳನ್ನು ಸಡಿಲ ಮಾಡುತ್ತಿರುವ ಕೆಲವು ದೇಶಗಳು ಇದನ್ನು ಜಾರಿಗೆ ತರುತ್ತಿವೆ. ನ್ಯೂಜಿಲೆಂಡ್, ಬೆಲ್ಜಿಯಂ ಮತ್ತು ಜರ್ಮನಿ ರೀತಿಯ ದೇಶಗಳು ಇದನ್ನು ಈಗಾಗಲೇ ಜಾರಿಗೆ ತಂದಿವೆ. ಫ್ರಾನ್ಸ್, ಆಸ್ಟ್ರಿಯಾ ಹಾಗೂ ಡೆನ್ಮಾರ್ಕ್ ರೀತಿಯ ದೇಶಗಳಲ್ಲಿಯೂ ಸಹ, ಒಬ್ಬ ವ್ಯಕ್ತಿಯು ತನ್ನ ಕುಟುಂಬ ಮತ್ತು ಸ್ನೇಹ ವಲಯದಲ್ಲಿ ಕೇವಲ ಹತ್ತು ಮಂದಿಯನ್ನು ಮಾತ್ರ ಭೇಟಿ ಮಾಡಲು ಅನುಮತಿ ನೀಡಲಾಗಿದೆ.
ಜರ್ಮನಿಯಲ್ಲಿ ಕೇವಲ ಎರಡು ಕುಟುಂಬಗಳಿಗೆ ಮಾತ್ರ ದೈಹಿಕವಾಗಿ ಪರಸ್ಪರ ಭೇಟಿ ಆಗಲು ಅವಕಾಶ ಇದೆ. ಉಳಿದಂತೆ ಅವರು ಬೇರೆ ಯಾರನ್ನೂ ಭೇಟಿ ಆಗುವಂತಿಲ್ಲ. ನ್ಯೂಜಿಲೆಂಡ್‌ನಲ್ಲಿ ಕೂಡ ಜನ ತಮ್ಮ ಆಪ್ತ ಸಹಾಯಕರು ಮತ್ತು ಕುಟುಂಬ ಸ್ನೇಹಿತರನ್ನು ಭೇಟಿ ಮಾಡಬಹುದು. ಅವರು ಆಯ್ಕೆ ಮಾಡಿಕೊಂಡ ಈ ಮುಚ್ಚಿದ ವಲಯವನ್ನು ‘ಬಬಲ್’ ಎಂದು ಕರೆಯಲಾಗುತ್ತದೆ. ಆಯ್ಕೆ ಮಾಡಿದ ಕೆಲವೇ ಕೆಲವು ಪರಿಚಯಸ್ಥರನ್ನು ಮಾತ್ರ ಭೇಟಿ ಮಾಡಲು ಸರ್ಕಾರ ತನ್ನ ನಾಗರಿಕರಿಗೆ ಅವಕಾಶ ನೀಡಿದ್ದು ತಮ್ಮ ‘ಬಬಲ್’ ರಕ್ಷಿಸಿಕೊಳ್ಳವ ಜವಾಬ್ದಾರಿಯನ್ನು ಆ ಗುಂಪು ಹೊರಬೇಕು ಎಂದು ಮನವಿ ಮಾಡಿದೆ. ತಮ್ಮ ಬಬಲ್‌ಗಾಗಿ ಯಾರನ್ನು ಆರಿಸಿಕೊಂಡಿದ್ದಾರೋ ಅವರ ಬಗ್ಗೆ ಜಾಗರೂಕರಾಗಿ ಇರಲು ಸರ್ಕಾರ ಜನರನ್ನು ಕೋರಿದೆ. ಯಾರು ಆಯ್ಕೆ ಆಗುತ್ತಾರೋ ಅವರು ತಮ್ಮನ್ನು ತಾವು ಸುರಕ್ಷಿತವಾಗಿ ಇರಿಸಿಕೊಳ್ಳುವ ಜೊತೆಗೆ ಇತರರಿಗೂ ಕೂಡ ಮಾರಕ ವೈರಸ್ ಹರಡದಂತೆ ಸುರಕ್ಷತೆ ಕಾಯ್ದುಕೊಳ್ಳಬೇಕಿದೆ.
ಬೆಲ್ಜಿಯಂ ಪ್ರಧಾನಿ ಸೋಫಿ ವಿಲಿಯಮ್ಸ್ ಕೂಡ ತಮ್ಮ ದೇಶದಲ್ಲಿ ಇದೇ ಬಗೆಯ ನೀತಿಯನ್ನು ಜಾರಿಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. 'ಕೊರೊನಾ ಬಬಲ್' ಹೆಸರಿನಲ್ಲಿ ಕೇವಲ ಎರಡು ಕುಟುಂಬಗಳಿಗೆ ಮಾತ್ರ ಇಲ್ಲಿ ಪರಸ್ಪರ ಭೇಟಿ ಆಗಲು ಸರ್ಕಾರ ಅವಕಾಶ ನೀಡಿದೆ. ಬ್ರಿಟನ್ ಕೂಡ ಇದೇ ರೀತಿಯ ಮಾರ್ಗವನ್ನು ಪರಿಗಣಿಸುತ್ತಿದೆ.
ಪ್ರಯಾಣಕ್ಕ ಇದೇ ತತ್ವ ಅನ್ವಯ ಆಗಲಿದೆಯೇ ?
ಕ್ಲಸ್ಟರಿಂಗ್ ರೀತಿಯೇ ಇದು ಕೂಡ ಇರಲಿದೆ. ದೇಶಗಳ ನಡುವಿನ ಆರ್ಥಿಕ ಚಟುವಟಿಕೆಯನ್ನು ಚುರುಕುಗೊಳಿಸಲು ಟ್ರಾವೆಲ್ ಬಬಲ್ ಕಾರ್ಯವಿಧಾನವನ್ನು ಜಾರಿಗೆ ತರಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ಕಡಿಮೆ ಇರುವ ದೇಶಗಳನ್ನು ಗುಂಪುಗಳಾಗಿ ವಿಂಗಡಣೆ ಮಾಡಲಾಗುತ್ತಿದೆ. ಈ ದೇಶಗಳ ನಡುವೆ ಸುರಕ್ಷಿತ ಪ್ರಯಾಣವನ್ನು ಮರುಸ್ಥಾಪನೆ ಮಾಡುವುದು ಇದರ ಉದ್ದೇಶವಾಗಿದೆ. ಇದು ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಕೂಡ ಕಾರಣವಾಗುತ್ತದೆ. ಜಾಗತಿಕ ಸಾರಿಗೆ ವ್ಯವಸ್ಥೆಯನ್ನು ಮತ್ತೆ ಸರಿದಾರಿಗೆ ತರಲು ಈ ಮಾದರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಭಾರತ ಕೂಡ ಇದನ್ನು ಗಣನೆಗೆ ತೆಗೆದುಕೊಂಡು ತನ್ನ ನೀತಿಗಳನ್ನು ರೂಪಿಸಲು ಮುಂದಾಗಬೇಕಾಗಿದೆ.
ಪ್ರಸ್ತುತ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳು ಕೋವಿಡ್ -19 ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ. ಎರಡೂ ದೇಶಗಳ ನಡುವಿನ ಪ್ರಯಾಣವನ್ನು ಪುನರುಜ್ಜೀವನಗೊಳಿಸಲು 'ಟ್ರಾನ್ಸ್ ತಸ್ಮನ್’ ( ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ತಸ್ಮನ್ ಸಮುದ್ರ ಇದ್ದು ಅದರ ಮೂಲಕ ಸಂಪರ್ಕ ಪಡೆಯುವ ಯೋಜನೆಗೆ ಈ ಹೆಸರು ) ಎಂಬ ‘ಟ್ರಾವೆಲ್ ಬಬಲ್’ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುತ್ತಿವೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಕೂಡ ಇದನ್ನು ದೃಢಪಡಿಸಿದ್ದಾರೆ. ಪ್ರಸ್ತುತ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದು ಯಶಸ್ವಿಯಾದರೆ, ತೈವಾನ್ ಮತ್ತು ಹಾಂಗ್ ಕಾಂಗ್ ದೇಶಗಳನ್ನು ಕೂಡ ಈ ಯೋಜನೆಯ ಅಡಿ ಸೇರಿಸಿಕೊಳ್ಳುವ ಯತ್ನಗಳು ಆರಂಭ ಆಗಲಿವೆ. ಇತ್ತ ಐರೋಪ್ಯ ಒಕ್ಕೂಟದ ಕೆಲವು ದೇಶಗಳ ಜೊತೆ ಸೇರಿ ಫಿನ್ಲೆಂಡ್ ಮತ್ತು ಪೋಲೆಂಡ್ ಕೂಡ ಈ ಬಗೆಯ ನೀತಿ ಜಾರಿಗೆ ತರಲು ಹೊರಟಿವೆ.
ಬಾಲ್ಟಿಕ್ ದೇಶಗಳಾದ ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ ಈ ತಿಂಗಳ 15 ರಿಂದ 'ಟ್ರಾವೆಲ್ ಬಬಲ್' ಪ್ರಾರಂಭ ಮಾಡುತ್ತಿವೆ. ಈ ದೇಶಗಳ ಜನರು ಅಲ್ಲಿಗೆ ಮುಕ್ತವಾಗಿ ಪ್ರಯಾಣ ನಡೆಸಬಹುದು. ಮೂರು ದೇಶಗಳಿಗೆ ಹೊರತಾದ ಜನ ಮಾತ್ರ ಕ್ಯಾರೆಂಟೈನ್‌ನಲ್ಲಿ 14 ದಿನಗಳ ಕಾಲ ಇರಬೇಕು.