ಚಮೋಲಿ : ದೇಶದಾದ್ಯಂತ ಅನ್ಲಾಕ್ 4.0 ಜಾರಿಯಾದರೂ ದೇಶದ ಕೊನೆಯ ಗ್ರಾಮ ಉತ್ತರಾಖಂಡದ ಮನಾದಲ್ಲಿ ಮಾತ್ರ ಇನ್ನೂ ಲಾಕ್ ಡೌನ್ ಮುಂದುವರೆದಿದೆ. ಹಾಗಂತ ಅಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ಇದೇ ಎಂದಲ್ಲ. ಸುಮಾರು 150 ಕುಟುಂಬಗಳು ವಾಸಿಸುವ ಮನಾದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದಿದ್ದರೂ, ಮುಂಜಾಗೃತೆಯ ದೃಷ್ಟಿಯಿಂದ ಲಾಕ್ ಡೌನ್ ಹೇರಲಾಗಿದೆ. ಇದರಿಂದಾಗಿ, ಇಲ್ಲಿನ ಪ್ರಸಿದ್ದ ಶ್ರದ್ದಾ ಕೇಂದ್ರ ಬದ್ರಿನಾಥ್ ಧಾಮ್ಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಗ್ರಾಮಸ್ಥರು ತೀವ್ರ ಅರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ.
ಮನಾ ಗ್ರಾಮವು ಬದ್ರಿನಾಥ್ ಧಾಮದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ಭೋಟಿಯಾ ಬುಡಕಟ್ಟಿನ ಜನರು ವಾಸಿಸುತ್ತಿದ್ದಾರೆ. ಚಳಿಗಾಲದಲ್ಲಿ ಗ್ರಾಮಸ್ಥರು ಗೋಪೇಶ್ವರನಗರದ ಗಿಂಗರನ್‌ನಲ್ಲಿ ವಾಸಿಸುತ್ತಾರೆ ಮತ್ತು ಬೇಸಿಗೆಯಲ್ಲಿ ತಮ್ಮ ಪೂರ್ವಜರ ಹಳ್ಳಿಯಾದ ಮನಾಕ್ಕೆ ಮರಳುತ್ತಾರೆ. ದೇಶಾದ್ಯಂತ ಅನ್ಲಾಕ್ ಘೋಷಣೆಯಾದರೂ, ಮನಾ ಗ್ರಾಮಸ್ಥರು ಮಾತ್ರ ಲಾಕ್ ಡೌನ್ ಮುಂದುವರೆಸಲು ನಿರ್ಧರಿಸಿದ್ದಾರೆ. ಇಡೀ ದೇಶ, ರಾಜ್ಯ ಮತ್ತು ಚಮೋಲಿ ಜಿಲ್ಲೆಯಲ್ಲಿ ಕೊರೊನಾ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಆದರೆ, ಮನಾ ಗ್ರಾಮವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಮತ್ತು ಇಲ್ಲಿ ಇದುವರೆಗೆ ಯಾವುದೇ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ.
ಮನಾ ಗ್ರಾಮದಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಹೊರಗಿನವರಿಗೆ ಗ್ರಾಮ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕಾರಣದಿಂದ ಗ್ರಾಮ ಸಂಪೂರ್ಣ ಸುರಕ್ಷಿತವಾಗಿದೆ. ಗ್ರಾಮಸ್ಥರು ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಯುತ್ತೇವೆ ಎಂದು ಗ್ರಾಮದ ಮುಖ್ಯಸ್ಥ ಪೀತಾಂಬರ್ ಮೊಲ್ಫಾ ಹೇಳಿದ್ದಾರೆ. ಬದ್ರಿನಾಥ್ ಧಾಮ್ಗೆ ತೀರ್ಥ ಯಾತ್ರೆ ಬರುವವರು ಗ್ರಾಮಸ್ಥರಿಂದ ತರಕಾರಿ, ಬೇಳೆ ಕಾಳುಗಳನ್ನು ಖರೀದಿಸುತ್ತಿದ್ದರು. ಆದರೆ, ಈ ಬಾರಿ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಸೀಮಿತವಾಗಿರುವುದರಿಂದ ಗ್ರಾಮಸ್ಥರಿಗೆ ವ್ಯಾಪಾರ ಕುಂಠಿತಗೊಂಡಿದೆ. ಹೀಗಾಗಿ, ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಗ್ರಾಮದಲ್ಲಿ ಲಾಕ್ ಡೌನ್ ಇರುವುದರಿಂದ ಇಂಡೋ-ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ಪರ್ಯಾಯ ಮಾರ್ಗವನ್ನು ನಿರ್ಮಿಸಲಾಗಿದೆ. ಇದರ ಮೂಲಕ ಯೋಧರು ತೆರಳುತ್ತಾರೆ. ಒಟ್ಟಿನಲ್ಲಿ ದೇಶದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದರೆ, ದೇಶದ ಕೊನೆಯ ಗ್ರಾಮ ಮಾತ್ರ ಇಂದಿಗೂ ಕೊರೊನಾ ಮುಕ್ತವಾಗಿದೆ.