ತ್ರಿಶೂರ್ : ಕುಟ್ಟನೆಲ್ಲೂರಿನಲ್ಲಿ ಗೆಳೆಯನಿಂದ ಚಾಕು ಇರಿತಕ್ಕೊಳಗಾಗಿದ್ದ ವೈದ್ಯೆ ಡಾ. ಸೋನಾ(30)ಮೃತಪಟ್ಟಿದ್ದಾರೆ. ಮೂವಟ್ಟಪುಜ ನಿವಾಸಿ ಮೃತ ಸೋನಾ ಮೇಲೆ ಮಂಗಳವಾರ ಸ್ನೇಹಿತ ಮಹೇಶ್ ಚಾಕುವಿನಿಂದ ಹಲ್ಲೆ ಮಾಡಿದ್ದ.
ಸೋನಾ ದಂತವೈದ್ಯೆಯಾಗಿದ್ದು, ಗೆಳೆಯ ಮಹೇಶ್ ಜೊತೆ ಸೇರಿ ಕುಟ್ಟನೆಲ್ಲೂರಿನಲ್ಲಿ ಡೆಂಟಲ್ ಕ್ಲಿನಿಕ್ ಒಂದನ್ನು ನಡೆಸುತ್ತಿದ್ದರು. ಈ ಮೊದಲೇ ಹಣಕಾಸು ವಿಚಾರದಲ್ಲಿ ಮಹೇಶ್ ಹಾಗೂ ಸೋನಾ ನಡುವೆ ಜಗಳ ನಡೆದು ಡಾ. ಸೋನಾ ಮಹೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ವಿಚಾರ ತಿಳಿದ ವೇಳೆ ಮಹೇಶ್ ಸೋನಾಗೆ ಚಾಕುವಿನಿಂದ ಚುಚ್ಚಿದ್ದ ಎನ್ನಲಾಗಿದೆ. ಹಲ್ಲೆ ಬಳಿಕ ಆರೋಪಿ ಮಹೇಶ್ ತಲೆಮರೆಸಿಕೊಂಡಿದ್ದಾನೆ. ಮೃತ ಡಾ. ಸೋನಾ ವಿಚ್ಛೇದಿತ ಮಹಿಳೆಯಾಗಿದ್ದು, ಗೆಳೆಯ ಮಹೇಶ್ ಜೊತೆಗೆ 2 ವರ್ಷದಿಂದ ಫ್ಲ್ಯಾಟ್‌ವೊಂದರಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.