ನವದೆಹಲಿ: ಖಾದಿ ಮತ್ತು ಇತರ ಗ್ರಾಮೋದ್ಯಮಗಳು ತಯಾರಿಸಿದ ಉತ್ಪನ್ನಗಳು ದೀಪಾವಳಿ ಸಂದರ್ಭದ ಮಾರಾಟದಲ್ಲಿ ಅದ್ಭುತ ಏರಿಕೆ ಕಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ 'ವೋಕಲ್ ಫಾರ್ ಲೋಕಲ್' ಪರಿಕಲ್ಪನೆಯ ಸ್ಪಷ್ಟ ಸಂದೇಶ ಎಂದು ಎಂಎಸ್‌ಎಂಇ ಸಚಿವಾಲಯ ತಿಳಿಸಿದೆ.
'2019ರ ದೀಪಾವಳಿಗಿಂತ ಈ ವರ್ಷ ದೀಪಾವಳಿ ಅವಧಿಯಲ್ಲಿ ಸುಮಾರು 300 ಪ್ರತಿಶತದಷ್ಟು ಮಾರಾಟದಲ್ಲಿ ಹೆಚ್ಚಳವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಮಳಿಗೆಗಳ ಮಾದರಿಗಳು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚು ಮಾರಾಟವಾಗಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ 5 ಕೋಟಿ ರೂ.ಗಳಷ್ಟು ಮಾರಾಟವಾಗಿತ್ತು. ಆದರೆ, ಈ ಬಾರಿ ಸುಮಾರು 21 ಕೋಟಿ ರೂ. ತಲುಪಿದೆ' ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಈ ದಾಖಲೆಯ ಹೆಚ್ಚಳವು ಕಂಡು ಬಂದಿದೆ. ಇನ್ನು ಈ ವೇಳೆ, ಜನರು ಖರೀದಿಸಿದ ವಸ್ತುಗಳೆಂದರೆ, ಅಗರಬತ್ತಿ, ಮೇಣದ ಬತ್ತಿ, ದೀಪ, ಜೇನುತುಪ್ಪ, ಲೋಹದ ಕಲಾ ಉತ್ಪನ್ನಗಳು, ಪೆಟ್ಟಿಗೆಗಳು ಸೇರಿದಂತೆ ಗಾಜಿನ ವಸ್ತುಗಳು, ಕೃಷಿ ಮತ್ತು ಆಹಾರ ವಸ್ತುಗಳು, ಹತ್ತಿ ಮತ್ತು ರೇಷ್ಮೆ ಬಟ್ಟೆಗಳು, ಉಣ್ಣೆ ಮತ್ತು ಕಸೂತಿ ಉತ್ಪನ್ನಗಳಾಗಿವೆ.